ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ, ಸ್ಪೀಕರ್ ಪಾತ್ರ: ಪ್ರಮುಖ ಆರೋಪಿ ಸ್ವಪ್ನ ಸುರೇಶ್ ​ಉವಾಚ ?

ತಿರುವನಂತಪುರಂ: ವಿಧಾನಸಭೆ ಚುನಾವಣೆಯ ಸಿದ್ಧತೆಯಲ್ಲಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬಹುಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆಯಲ್ಲಿ ಅವರ ಪಾತ್ರದ ಕುರಿತು ಸ್ವತಃ ಪ್ರಮುಖ ಆರೋಪಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಚಿನ್ನ ಕಳ್ಳ ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸ್ವಪ್ನ ಸುರೇಶ್, ಚಿನ್ನ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮತ್ತು ರಾಜ್ಯದ ಇತರೆ ಮೂವರು ಸಚಿವರ ಪಾತ್ರವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾದ ಸ್ವಪ್ನಾ ಸುರೇಶ್, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮತ್ತು ರಾಜ್ಯದ ಇತರೆ ಮೂವರು ಸಚಿವರು ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಸುಂಕ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.  

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಯುಎಇಯ ಹಿಂದಿನ ಕಾನ್ಸುಲ್ ಜನರಲ್ ನಡುವೆ ಆಪ್ತ ಬಾಂಧವ್ಯವಿತ್ತು. ಅವರಿಬ್ಬರ ನಡುವೆ ಅಕ್ರಮ ಹಣ ವ್ಯವಹಾರ ನಡೆದಿತ್ತು ಎಂದು ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ್ದಾರೆ ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸುಂಕ ಆಯುಕ್ತ ಸುಮಿತ್ ಕುಮಾರ್ ತಿಳಿಸಿದ್ದಾರೆ. 

ಕೆಲವು ದಿನಗಳ ಹಿಂದಷ್ಟೇ ಹಳೆಯ ಪ್ರಕರಣವೊಂದರಲ್ಲಿ ಪಿಣರಾಯಿ ವಿಜಯನ್ ಅವರ ಅಳಿಯ ಮೊಹಮ್ಮದ್ ರಿಯಾಸ್ ಜೈಲು ಪಾಲಾಗಿದ್ದರು. ಈಗ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ಸವಾಲು ಅವರಿಗೆ ಎದುರಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಮುಖ್ಯ ಕಾರ್ಯದರ್ಶಿ ಮತ್ತು ಅವರ ಖಾಸಗಿ ಸಿಬ್ಬಂದಿ ತಂಡ ಒಬ್ಬ ಸದಸ್ಯರ ಜತೆಗೆ ತಮಗೆ ಉತ್ತಮ ಸಂಪರ್ಕವಿತ್ತು ಎಂದು ಸ್ವಪ್ನಾ ಸುರೇಶ್ ತಿಳಿಸಿದ್ದಾರೆ ಎಂಬುದಾಗಿ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

​ಪಿಣರಾಯಿ ​ಸೂಚನೆಯಂತೆ ವ್ಯವಹಾರ: ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರ ಸೂಚನೆಯ ಮೇರೆಗೆ ವಿದೇಶಿ ಕರೆನ್ಸಿಯನ್ನು ಕಳಸಾಗಣೆ ಮಾಡಲಾದ ಚಟುವಟಿಕೆಗಳ ಬಗ್ಗೆ ತಮಗೆ ತಿಳಿದಿದೆ ಎಂಬುದನ್ನು ಸಹ ಸ್ವಪ್ನಾ ಒಪ್ಪಿಕೊಂಡಿದ್ದಾರೆ ಎಂದು ಕಸ್ಟಮ್ಸ್ ಆಯುಕ್ತರು ಹೇಳಿದ್ದಾರೆ. 

ರಾಯಭಾರ ಕಚೇರಿ ನೆರವಿನೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಶ್ರೀರಾಮಕೃಷ್ಣನ್ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿರುವ ಬಗ್ಗೆ ತಮಗೆ ನಿಖರವಾಗಿ ತಿಳಿದಿದೆ ಎಂದು ಆಕೆ ತಿಳಿಸಿದ್ದಾರೆ. ರಾಜ್ಯ ಸಂಪುಟದ ಮೂವರು ಸಚಿವರು ಹಾಗೂ ಸ್ಪೀಕರ್ ಅವರ ಅಸಹಜ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಸ್ಪಷ್ಟವಾಗಿ ವಿವರಿಸಿದ್ದಾರೆ’ ಎಂದು ಹೇಳಲಾಗಿದೆ. 
 ​​

 
 
 
 
 
 
 
 
 
 
 

Leave a Reply