ಪ್ರಧಾನಿ ಮೋದಿ ಮತ್ತು ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ ಬೈಂದೂರಿನ ಗೋಪಾಲ ಬಂಗೇರ ಸಾರ್ವಜನಿಕ ಕ್ಷಮೆ ಕೇಳಬೇಕು- ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು: ಪ್ರಧಾನಿ ಮೋದಿ ಮತ್ತು ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ ಬೈಂದೂರಿನ ಗೋಪಾಲ ಬಂಗೇರ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಬಿಜೆಪಿ ಕರ್ನಾಟಕ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ಅವರ ಆಗ್ರಹ ಹೀಗಿದೆ, ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಯ ಮತ್ತು ವಿವಿಧ ಸಮುದಾಯಗಳ ನಡುವೆ ಬಾಂಧವ್ಯವನ್ನು ಬೆಸೆದಿರುವಂತ ಪ್ರಾಚೀನ ನಾಗರಿಕತೆ. ಇಲ್ಲಿ ಅನೇಕ ಜಾತಿ ಮತಗಳು ಮತ್ತು ಸಮುದಾಯಗಳಿಗೆ ಸಂಬಂಧಿಸಿದ ಆಚರಣೆಗಳು, ಸಂಪ್ರದಾಯಗಳು ಅನಾದಿ ಕಾಲದಿಂದ ಸಹಬಾಳ್ವೆಗೆ ಪೂರಕವಾಗಿ ನಡೆದುಕೊಂಡು ಬಂದಿರುವಂಥದ್ದು ಸತ್ಯ. ದೇಶದ ಭವ್ಯ ಪರಂಪರೆಗೆ ಎಲ್ಲಾ ಸಮುದಾಯಗಳು ತಮ್ಮ ಪಾಲಿನ ಅಪಾರ ಕೊಡುಗೆ ನೀಡಿರುವುದು ಅಷ್ಟೇ ಸತ್ಯ.

ಇತ್ತೀಚಿನ ದಿನಗಳಲ್ಲಿ ಸಮುದಾಯಗಳ ನಡುವೆ ಒಡಕು, ದ್ವೇಷ ಮತ್ತು ವೈಷಮ್ಯವನ್ನು ಮೂಡಿಸುವುದಕ್ಕಾಗಿ ಹಾಗೂ ವೈಯುಕ್ತಿಕ/ ರಾಜಕೀಯ ಲಾಭಕ್ಕಾಗಿ ಈ ರೀತಿಯ ಅಸಭ್ಯ ಮತ್ತು ಅನಾಗರಿಕ ವರ್ತನೆಗಳು, ಅಸಂವಿಧಾನೀಕ ಸಾರ್ವಜನಿಕ ಹೇಳಿಕೆಗಳು ಮತ್ತು ದುರುದ್ದೇಶದ ನಡೆ ಸಮಾಜದ ಸ್ವಾಸ್ಥ್ಯವನ್ನು ಕೆಡೆಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿವೆ.

ನೆಚ್ಚಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರು ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ಸ್ವಂತಕ್ಕೆ ಏನು ಯೋಚನೆ ಮಾಡದೆ, ದೇಶವನ್ನು ಜಗತ್ತಿನ ಭೂಪಟದಲ್ಲಿ ಅಗ್ರಸ್ಥಾನದಲ್ಲಿರಿಸುವುದಕ್ಕಾಗಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ದಿನಗಳ ದುರಾಡಳಿತದಿಂದ ಬೇಸತ್ತ ದೇಶದ ಭವಿಷ್ಯಕ್ಕೆ ಒಂದು ಹೊಸ ದಿಕ್ಕನ್ನು ತೋರಿಸುವ ಪ್ರಯತ್ನದಲ್ಲಿದ್ದಾರೆ. ಅವರ ಬಗ್ಗೆ ಕನಿಷ್ಠವಾಗಿ ಮಾತನಾಡುವಂಥ ಬೈಂದೂರಿನ ಗೋಪಾಲ ಬಂಗೇರ ಅವರ ಕೀಳುಮಟ್ಟದ ಹೇಳಿಕೆ ಅವರ ಕನಿಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ದೇಶದ ಸಾಂವಿಧಾನಿಕ ಹುದ್ದೆಯಾದ ಪ್ರಧಾನಿಯ ಸ್ಥಾನವನ್ನು ಈ ರೀತಿಯಲ್ಲಿ ಸಾರ್ವಜನಿಕವಾಗಿ ಟೀಕೆ ಮಾಡುವುದು ಸರ್ವಥಾ ಖಂಡನೀಯ ಮತ್ತು ಈ ದುರ್ವರ್ತನೆ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರುತ್ತದೆ ಎಂಬುದನ್ನು ಅವರು ಗಮನಿಸಬೇಕು.

ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯ ಸ್ವಂತಕ್ಕೇನೂ ಅಪೇಕ್ಷೆ ಪಡದೆ ಸಮಾಜದ ಹಿತಕ್ಕಾಗಿ ದೇಶದಾದ್ಯಂತ ತನ್ನನ್ನು ತೊಡಗಿಸಿಕೊಂಡಿರುವುದು ಐತಿಹಾಸಿಕ ಸತ್ಯ. ಈ ದೇಶದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರ. ಯಾವತ್ತೂ ದೇಶದ ಹಿತವನ್ನು ಬಯಸುವ ಸಣ್ಣ ಸಂಖ್ಯೆಯಲ್ಲಿರುವ ಬ್ರಾಹ್ಮಣವರ್ಗವನ್ನು ದೂಷಿಸುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿರುವ ತಥಾಕಥಿತ ಬುದ್ಧಿಜೀವಿಗಳು, ಎಡಬಿಡಂಗಿಗಳು ಹಾಗೂ ಸಮಾಜದಲ್ಲಿ ಒಡಕು ಉಂಟು ಮಾಡಲು ಪ್ರಯತ್ನಿಸುತ್ತಿರುವ ವಿಕೃತ ಮನಸ್ಥಿತಿಯ ವ್ಯಕ್ತಿಗಳು ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಪುಕ್ಕಟೆ ಪ್ರಚಾರ ಬಯಸುವ ಜಾಯಮಾನದವರಾಗಿದ್ದು ಗೋಪಾಲ ಬಂಗೇರ ಅವರ ಈ ರೀತಿಯ ಉದ್ಧಟತನ ಮತ್ತು ಬೇಜವಾಬ್ದಾರಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಾ ಅವರು ಕೂಡಲೇ ಸಾರ್ವಜನಿಕವಾಗಿ ಸಮುದಾಯದ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.

 
 
 
 
 
 
 
 
 
 
 

Leave a Reply