ನವರಾತ್ರಿಯ ಎಂಟನೇ ದಿನ “ಮಹಾಗೌರಿ”

ನವರಾತ್ರಿಯ ಎಂಟನೇ ದಿನ ಮಹಾಗೌರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ತಾಯಿ ಗೌರಿಯ ವಯಸ್ಸು ಯಾವಾಗಲೂ ಹದಿನಾರು ಆಗಿರುತ್ತದೆ. ಗೌರಿಯು ಗಿರಿಗಳ ಪುತ್ರಿ. ಅವಳು ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ. ಚಂದ್ರನ ತೇಜಸ್ಸು ಆಕೆಯ ಮುಖದಲ್ಲಿ ಲಾಸ್ಯವಾಡುತ್ತಿರುತ್ತದೆ. ಆಕೆ ಮತ್ತೊಂದು ಕೈಯ್ಯಲ್ಲಿ ಭಕ್ತರಿಗೆ ಆಶೀರ್ವಾದ ಮಾಡುತ್ತಿರುತ್ತಾಳೆ.

ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸಿಗೆ ಕುಳಿತ ಆಕೆಯು ಅನ್ನಾಹಾರ, ನೀರು ತ್ಯಜಿಸಿದಳು. ಸುದೀರ್ಘ ಕಾಲ ಆಕೆ ತಪಸ್ಸಿಗೆ ಕುಳಿತ ಕಾರಣ ಆಕೆಯ ಮೈಗೆ ಧೂಳು ಮತ್ತಿಕೊಂಡಿತು. ಬಳ್ಳಿಗಳು ಬೆಳೆದವು. ಸೂರ್ಯನ ವಿಪರೀತ ಶಾಖದಿಂದ ಆಕೆಯ ದೇಹವು ಬೆಂದುಹೋದಂತಾಯಿತು. ಆದರೂ ಆಕೆ ಸಾವಿರ ವರ್ಷಗಳ ಕಾಲ ಶಿವನಿಗಾಗಿ ಕಾದು ಕುಳಿತಳು.

ಪಾರ್ವತಿಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು, ಆಕೆಯ ಸ್ಥಿತಿ ಕಂಡು ಗಂಗೆಯ(Ganga River) ಪವಿತ್ರ ಜಲವನ್ನು ಆಕೆಯ ಮೇಲೆ ಪ್ರೋಕ್ಷಣೆ ಮಾಡಿದಾಗ ಆಕೆಯ ಮುಖ ಮೊದಲಿಗಿಂತ ತೇಜಸ್ವಿಯಾಯಿತು. ಸ್ಪಟಿಕದ ಕಲ್ಲಿನಂತೆ ಹೊಳೆಯುತ್ತಿದ್ದ ಆಕೆಯ ಮುಖವು ಚಂದ್ರನ ಶಾಂತತೆಯನ್ನು ಹೊಂದಿತು. ಆಕೆಯು ಮಹಾಗೌರಿಯಾಗಿ ಹೊಸ ಜನ್ಮ ಎತ್ತಿದಳು. ಶಿವನು ಆಕೆಯ ಭಕ್ತಿಗೆ ಮೆಚ್ಚಿ ಆಕೆಯನ್ನು ವರಿಸಿದ.

ಇನ್ನೊಂದು ಪುರಾಣದ ಕತೆಯ ಪ್ರಕಾರ ತಾಯಿ ಗೌರಿಯು ತಪಸ್ಸು ಮಾಡುವಾಗ ಹಸಿದಿದ್ದ ಸಿಂಹವೊಂದು ಆಹಾರ ಅರಸಿ ಗೌರಿ ದೇವಿಯ ಬಳಿ ಬಂತು. ಆದರೆ, ಆಕೆ ತಪಸ್ಸು ಮಾಡುತ್ತಿರುವ ಕಾರಣ ಆ ಸಿಂಹವು ಅಲ್ಲಿಯೇ ಕಾದಿದ್ದು ಬಡಕಲಾಯಿತು. ತಾಯಿ ಗೌರಿ ಕಣ್ಣು ಬಿಟ್ಟಾಗ ಬಡಕಲಾಗಿದ್ದ ಸಿಂಹವನ್ನು ಕಂಡು ಕರಗಿಹೋದಳು. ಅಯ್ಯೋ ನಾನು ತಪಸ್ಸು ಮಾಡುವಾಗ ಈ ಸಿಂಹ ಆಹಾರ ಇಲ್ಲದೆ ಇಲ್ಲಿಯೇ ಕುಳಿತಿದೆಯಲ್ಲಾ ಎಂದು ನೊಂದು ಸಿಂಹವನ್ನು ತಾಯಿ ಗೌರಿಯು ತನ್ನ ವಾಹವನ್ನಾಗಿ ಮಾಡಿಕೊಂಡಳು. ಹಾಗಾಗಿಯೇ ತಾಯಿ ಗೌರಿಗೆ ಸಿಂಹ ಮತ್ತು ಎತ್ತು ಎರಡೂ ವಾಹನಗಳಾಗಿವೆ.

ಮಹಾಗೌರಿಯು ರಾಹುವಿನ ಅಧಿಪತಿಯಾಗಿದ್ದಾಳೆ. ರಾಹುವಿನ ಪೀಡೆಯಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸಿ ತನ್ನ ಭಕ್ತರನ್ನು ಆಕೆ ಆಶೀರ್ವದಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳೂ ಮನುಷ್ಯನಿಗೆ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ತಾಯಿ ಗೌರಿ ನಿವಾರಿಸಿ ಸ್ಪಷ್ಟ ಚಿತ್ರಣ ನೀಡುತ್ತಾಳೆ. ನಮ್ಮ ಹೃದಯಲ್ಲಿ ಆತ್ಮವಿಶ್ವಾಸ ತುಂಬಿ ಯಶಸ್ಸಿನ ಕಡೆಗೆ ದಾರಿ ತೋರುತ್ತಾಳೆ.

 
 
 
 
 
 
 
 
 
 
 

Leave a Reply