ಸಿದ್ದರಾಮಯ್ಯ ಗೋಸುಂಬೆ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಒಬ್ಬ ಗೋಸುಂಬೆ ರಾಜಕಾರಣಿ ಎಂದು ಬಿಜೆಪಿ ಎಸ್‍.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಂಕಿ ಬಿದ್ದಾಗ ಕೈಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರು ಒಬ್ಬ ಗೋಸುಂಬೆ ರಾಜಕಾರಣಿ ಎಂದು ಅವರು ನುಡಿದರು.

ಸಿದ್ದರಾಮಯ್ಯ ಅವರು ಯಾವತ್ತೂ ಒಳ ಮೀಸಲಾತಿ ಪರ ಇರಲಿಲ್ಲ. ಹುಬ್ಬಳ್ಳಿಯಲ್ಲಿ 2017ರಲ್ಲಿ ನಡೆದ ಮಾದಿಗ ಸಮುದಾಯದ ಮೀಸಲಾತಿ ಒತ್ತಾಯಿಸುವ ಸುಮಾರು 2 ಲಕ್ಷ ಜನರು ಸೇರಿದ್ದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪಾಲ್ಗೊಂಡಿದ್ದರೂ ನ್ಯಾಯಮೂರ್ತಿ ಸದಾಶಿವ ಅವರ ಶಿಫಾರಸುಗಳನ್ನು ಜಾರಿ ಮಾಡುವ ಕುರಿತು ಮಾತನಾಡಲಿಲ್ಲ ಎಂದು ಆಕ್ಷೇಪಿಸಿದರು.

ಸಮ್ಮಿಶ್ರ ಸರಕಾರವೂ ಸೇರಿ ಆರು ವರ್ಷಗಳ ಕಾಲ ಈ ವರದಿ ಚರ್ಚೆಗೆ ಬರಲಿಲ್ಲ. ನಮ್ಮ ಪಕ್ಷದ ಕೆಲವು ಶಾಸಕರು ಇದರ ಅನುಷ್ಠಾನ ಕುರಿತು ಕೇಳಿದಾಗ ಖರ್ಗೆ, ಪರಮೇಶ್ವರ್, ಎಚ್.ಸಿ. ಮಹದೇವಪ್ಪ ವಿರೋಧ ಇದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ನಾವು ಅಧಿಕಾರಕ್ಕೆ ಬಂದರೆ ಅದನ್ನು ಜಾರಿಗೊಳಿಸುತ್ತೇವೆ ಎನ್ನುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ ಅವರು ಕೂಡ ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿಯುವವರು. ಇವರಿಗೆ ದಲಿತ ಪ್ರೇಮ ಇಲ್ಲ; ದಲಿತರ ಪರವಾಗಿ ಇವರು ಇಲ್ಲ ಎಂದು ತಿಳಿಸಿದರು.

ಅರೆಸ್ಟ್ ಮಾಡಿದವರನ್ನು ಬಿಟ್ಟು ಬಿಡಿ ಎನ್ನುತ್ತಾರೆ; ಆದರೆ ಅದು ಪ್ರಿವೆಂಟಿವ್ ಅರೆಸ್ಟ್ ಅಷ್ಟೇ ಎಂದು ವಿವರಿಸಿದರು.

ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು. ಎಸ್‍.ಸಿ. – ಎಸ್‍.ಟಿ. ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು ನಮ್ಮ ಸರಕಾರವೇ ಹೊರತು ಬೇರೆಯವರಲ್ಲ. ಇದನ್ನು ಕಾಂಗ್ರೆಸ್ ಪಕ್ಷದವರು ಅರಿತಿರಲಿ ಎಂದು ತಿಳಿಸಿದರು.

ಸಾಧಕ ಬಾಧಕಗಳನ್ನು ಗಮನಿಸಿ, ಒಳ ಮೀಸಲಾತಿ ಸಂಬಂಧ ಸರಕಾರವು ಶೀಘ್ರವೇnk ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

 
 
 
 
 
 
 
 
 
 
 

Leave a Reply