ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ: ಮೋಹನ್ ಭಾಗವತ್

ದೆಹಲಿ: ಉತ್ತರ ಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿಯ ವಿವಾದವನ್ನು ಪರಸ್ಪರ ಮಾತುಕತೆ ಮತ್ತು ಸಹಮತದ ಒಪ್ಪಂದಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ (ಮುಖ್ಯಸ್ಥರು) ಮೋಹನ್ ಭಾಗವತ್ ಸಲಹೆ ಮಾಡಿದರು.

ಜ್ಞಾನವಾಪಿ ಮಸೀದಿಯಲ್ಲಿ ಕೋರ್ಟ್ ಆದೇಶದ ಮೇರೆಗೆ ನಡೆದ ವಿಡಿಯೊ ಸಮೀಕ್ಷೆಯಲ್ಲಿ ಶಿವಲಿಂಗದಂಥ ಆಕೃತಿ ಪತ್ತೆಯಾಗಿದೆ ಎಂಬ ವರದಿಗಳು ಬಹಿರಂಗವಾದ ನಂತರ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವೈಮನಸ್ಸು ಮೂಡುವ ಬೆಳವಣಿಗೆಗಳು ನಡೆದಿತ್ತು. ಪ್ರಸ್ತುತ ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಇದೀಗ ಆರ್​ಎಸ್​ಎಸ್​ ಮುಖ್ಯಸ್ಥರು ನೀಡಿರುವ ಹೇಳಿಕೆಯು ಹಲವು ಕಾರಣಗಳಿಂದ ಮಹತ್ವ ಪಡೆದಿದೆ.

‘ಕೆಲವು ಪ್ರದೇಶಗಳ ಬಗ್ಗೆ ನಮಗೆ ಭಕ್ತಿ ಇರುತ್ತದೆ. ಅದರ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಆದರೆ ಪ್ರತಿದಿನ ಹೊಸಹೊಸ ಸ್ಥಳಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಾಗಲಾರದು.

 ನಾವು ಪ್ರತಿದಿನ ಹೊಸಹೊಸ ವಿವಾದಗಳನ್ನು ಹುಟ್ಟುಹಾಕಬಾರದು. ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಆ ಶ್ರದ್ಧೆಗೆ ಅನುಗುಣವಾಗಿದೆ. ಹಾಗೆಂದು ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸರಿಯೇ’ ಎಂದು ಪ್ರಶ್ನಿಸಿದರು.

ಜ್ಞಾನವಾಪಿ ಮಸೀದಿ ವಿವಾದವನ್ನು ಮತ್ತೊಂದು ಅಯೋಧ್ಯೆ ವಿವಾದವಾಗಿಸಬೇಕು ಎನ್ನುವ ಪ್ರಯತ್ನಗಳಿಗೆ ಭಾಗವತ್ ಅವರ ಈ ಹೇಳಿಕೆ ತಣ್ಣೀರು ಎರಚಿದೆ.

 ಬೀದಿಬೀದಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಇದನ್ನೊಂದು ದೇಶವ್ಯಾಪಿ ಜನಾಂದೋಲನವಾಗಿಸಬೇಕು ಎಂದು ಹಿಂದುತ್ವ ಪರ ಹೋರಾಟಗಾರರು ಯತ್ನಿಸುತ್ತಿದ್ದರು. ಇಂಥ ಪ್ರಯತ್ನಗಳನ್ನು ಆರ್​ಎಸ್​ಎಸ್​ ಸಮರ್ಥಿಸುವುದಿಲ್ಲ ಎಂದು ಮೋಹನ್ ಭಾಗವತ್ ಇದೀಗ ಸ್ಪಷ್ಟಪಡಿಸಿದ್ದಾರೆ.

‘ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಲೇ ಇವೆ.

 ನಾವು ಇತಿಹಾಸ ಬದಲಿಸಲು ಆಗುವುದಿಲ್ಲ. ಇಂದಿನ ಹಿಂದೂ ಅಥವಾ ಇಂದಿನ ಮುಸ್ಲಿಂ ಇದಕ್ಕೆ ಹೊಣೆಯಲ್ಲ. ಇಸ್ಲಾಂ ಧರ್ಮವು ಹೊರಗಿನಿಂದ ದಾಳಿಕೋರರೊಂದಿಗೆ ಬಂತು.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಆತ್ಮಸ್ಥೈರ್ಯ ಕುಗ್ಗಿಸಲೆಂದು ಇಲ್ಲಿನ ದೇವಸ್ಥಾನಗಳನ್ನು ಅವರು ಕೆಡವುತ್ತಿದ್ದರು’ ಎಂದು ನಾಗಪುರದಲ್ಲಿ ಅವರು ವಿವರಿಸಿದರು.

ಹಿಂದೂಗಳು ಎಂದಿಗೂ ಮುಸ್ಲಿಮರಿಗೆ ಕೆಡುಕು ಬಯಸುವುದಿಲ್ಲ.

 ಇಂದಿನ ಮುಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದರು. ತಮಗೆ ವಿಶೇಷವಾದ ಶ್ರದ್ಧೆಯಿರುವ ಸ್ಥಳಗಳ ಬಗ್ಗೆ ಮಾತ್ರ ಹಿಂದೂಗಳು ಧ್ವನಿ ಎತ್ತುತ್ತಿದ್ದಾರೆ.

ತಮ್ಮ ಆತ್ಮಸ್ಥೈರ್ಯ ಕುಗ್ಗಿಸಲೆಂದು ಹಿಂದಿನ ಆಡಳಿತಗಾರರು ಮಾಡಿದ್ದ ತಪ್ಪು ಸರಿಪಡಿಸಬೇಕು ಎಂದು ಹಿಂದೂಗಳು ಒತ್ತಾಯಿಸುತ್ತಿದ್ದಾರೆ. ಇಂಥ ವಿವಾದಗಳನ್ನು ಪರಸ್ಪರ ವಿಶ್ವಾಸದಿಂದ ಶಾಶ್ವತವಾಗಿ ಪರಿಹರಿಸಬೇಕು.

 ನ್ಯಾಯಾಲಯದ ಬಗ್ಗೆ ಗೌರವ ಇರಿಸಿಕೊಳ್ಳಬೇಕು. ಎಂದಿಗೂ ತೀರ್ಪುಗಳನ್ನು ಅವಮಾನಿಸಬಾರದು ಎಂದು ಸಲಹೆ ನೀಡಿದರು.

 
 
 
 
 
 
 
 
 
 
 

Leave a Reply