ಮಣಿಪಾಲದ ಎಂಐಟಿ ಕಂಟೈನ್‌ಮೆಂಟ್ ಝೋನ್ : ಜಿಲ್ಲಾಧಿಕಾರಿ ಘೋಷಣೆ

ಉಡುಪಿ:ಕೊರೋನಾ ಅತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಹಾಗೂ ಮಾಹೆ ಪರಿಸರದಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಬರುತ್ತಿರುವವರ ಸಂಖ್ಯೆಯ ಭಾರೀ ಹೆಚ್ಚಳವಾಗಿತ್ತು. ಈ ಹಿನ್ನೆಲೆ ಎಂಐಟಿ ಕ್ಯಾಂಪಸ್ ಪರಿಸರವನ್ನು ಕಂಟೈನ್‌ ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ.

ಎಂಐಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯುತಿದ್ದು, ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆ ಬರೆಯಲೆಂದು ಬಂದಿದ್ದಾರೆ. ಹಲವರು ಹಾಸ್ಟೆಲ್‌ಗಳಲ್ಲಿ, ಇನ್ನುಳಿದವರು ಮಣಿಪಾಲ ಪರಿಸರದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ವರದಿಯಾದವರಲ್ಲಿ ಶೇ.75ಕ್ಕೂ ಅಧಿಕ ಮಂದಿ ಮಣಿಪಾಲದವರಾಗಿದ್ದಾರೆ. ನಿನ್ನೆ ಪಾಸಿಟಿವ್ ಬಂದ 32 ಮಂದಿಯಲ್ಲಿ 27 ಮಂದಿ ಹಾಗೂ ಇಂದು ಪಾಸಿಟಿವ್ ಬಂದ 42ರಲ್ಲಿ 26 ಮಂದಿ ಎಂಐಟಿಯ ವಿದ್ಯಾರ್ಥಿಗಳೇ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

 ವಿದ್ಯಾರ್ಥಿಗಳಿಗೆ ಶುಕ್ರವಾರ ಕೊನೆಯ ಪರೀಕ್ಷೆಯೊಂದು ಉಳಿದಿದೆ. ಆದರೆ ಇವರು ಆ ಪರೀಕ್ಷೆಯಲ್ಲಿ ಭಾಗವಹಿಸಬೇಕಿದ್ದರೆ, ಕೋವಿಡ್ ಮಾರ್ಗಸೂಚಿಯಂತೆ ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಿದೆ. ಅವರಲ್ಲಿ ರೋಗದ ಲಕ್ಷಣಗಳಿಲ್ಲದೇ ಇರುವುದರಿಂದ ಹೋಮ್ ಐಸೋಲೇಷನ್‌ ನಲ್ಲಿದ್ದಾರೆ. ಆದರೆ ಹೊರಗೆಲ್ಲೂ ಓಡಾಡದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕೆಂದು ಎಂಐಟಿ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಒಂದು ವೇಳೆ ಶುಕ್ರವಾರದ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಲು ಸಾಧ್ಯವಿಲ್ಲದಿದ್ದರೆ ಅದನ್ನು ಮುಂದೂಡುವಂತೆಯೂ ತಿಳಿಸಿಲಾಗಿದೆ.

 
 
 
 
 
 
 
 
 
 
 

Leave a Reply