ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು!

ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದು ಬಿದ್ದು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಹೆಣ್ಣೂರಿನ ಹೆಚ್‌ಬಿಆರ್ ಲೇಔಟ್ ಬಳಿ‌ ನಡೆದಿದೆ. ನಾಗವಾರ ನಿವಾಸಿಯಾಗಿದ್ದ ತೇಜಸ್ವಿನಿ (28), ಅವರ ಎರಡೂವರೆ ವರ್ಷದ ಪುತ್ರ ವಿಹಾನ್ ಮೃತಪಟ್ಟಿದ್ದಾರೆ. 

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸದಲ್ಲಿದ್ದ ಪತ್ನಿ ತೇಜಸ್ವಿನಿ ಅವರನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ ಲೋಹಿತ್ ಕುಮಾರ್ ತಮ್ಮ ಅವಳಿ ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ, ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್ ಕುಸಿದಿದ್ದು ಬೈಕಿನಲ್ಲಿ ಸಾಗುತ್ತಿದ್ದ ಕುಟುಂಬದ ಮೇಲೆ ಬಿದ್ದಿದೆ. 

ಇದ್ದಕ್ಕಿದ್ದ ಹಾಗೆ ದ್ವಿಚಕ್ರ ವಾಹನದ ಮೇಲೆ ಮೆಟ್ರೋ ಪಿಲ್ಲರ್ ಕುಸಿದು ಬಿದ್ದಿದ್ದು ಕೂಡಲೇ ಸ್ಥಳೀಯರು ಸೇರಿ ಆಲ್ಟಿಯಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ತೇಜಸ್ವಿನಿ ಮತ್ತು ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪತಿ ಲೋಹಿತ್ ಕುಮಾರ್‌ ಹಾಗೂ ಹೆಣ್ಣು ಮಗು ಗಂಭೀರ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ‌ ಎಂದು ಡಿಸಿಪಿ ಡಾ.ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.

ಪತ್ನಿ ತೆಜಸ್ವಿನಿಯನ್ನ ಕೆಲಸಕ್ಕೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್ ನಲ್ಲಿ ಬಿಡಲು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದಿದೆ. ಮೆಟ್ರೋ ಪಿಲ್ಲರನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಕಬ್ಬಿಣದ ರಾಡ್ ಗಳನ್ನು ಸೂಕ್ತವಾಗಿ ಬಳಸಿಲ್ಲ. ಇದರಿಂದ ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಮೆಟ್ರೋ ಕಾಮಗಾರಿಯನ್ನು ಬಿಎಂಆರ್ ಸಿಎಲ್ ಮಾಡುತ್ತಿದ್ದು ದುರಂತದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗುತ್ತಿಗೆದಾರರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಘಟನೆ ಏನು ಕಾರಣ. ಗುತ್ತಿಗೆದಾರರ ಲೋಪ ಆಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

 
 
 
 
 
 
 
 
 
 
 

Leave a Reply