ಖ್ಯಾತ ವಿಮರ್ಶಕ ಎಚ್ ದಂಡಪ್ಪನವರಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ-2022

ವಿಚಾರಧಾರತೆಯ ಪಕ್ವತೆ, ಕ್ರಮಬದ್ಧ ಅಧ್ಯಯನ ಶೀಲತೆ , ಅಗಾಧವಾದ ಶ್ರಮಕ್ಕೆ ಪೂರಕವಾದ ಏಕಾಗ್ರತೆ, ಸಮಕಾಲೀನ ಆಗುಹೋಗುಗಳನ್ನು ಕುರಿತಂತೆ ಅನನ್ಯತೆ , ಕೃತಿಗಳ ಕುರಿತಂತೆ ಆಪ್ತತೆ ಇವೆಲ್ಲವೂ ಸೇರಿದ ವಿಮರ್ಶಾ ಕೃತಿಗಳು ವಿಮರ್ಶಾ ಬರಹಗಳು ಓದುಗರ ಮನ ಮುಟ್ಟುತ್ತವೆ , ಹೃದಯ ತಟ್ಟುತ್ತವೆ. ಇಂತಹ ವಿಮರ್ಶಾ ಬರಹಗಳ ಮೂಲಕ ಮನೆಮಾತಾದವರು ಖ್ಯಾತ ವಿಮರ್ಶಕ ಎಚ್ ದಂಡಪ್ಪನವರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೊಂಡ್ರಹಳ್ಳಿ ಗ್ರಾಮದವರಾದ ಇವರಿದೀಗ ಬೆಂಗಳೂರು ನಿವಾಸಿ.

ದಿ. ಹನುಮಪ್ಪ ಮತ್ತು ಪಾಪಮ್ಮ ದಂಪತಿಗಳ ಪುತ್ರರಾದ ಇವರು ಸ್ವಂತ ಊರಿನಲ್ಲಿ ಪ್ರೈಮರಿ ಶಿಕ್ಷಣ ಮುಗಿಸಿ ನಂದಗುಡಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಬೆಂಗಳೂರಿನ ಸರ್ಕಾರಿ ಆರ್ಟ್ಸ್‌ ಕಾಲೇಜಿನಲ್ಲಿ ಬಿ ಎ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿಂದ ಡಾ ಡಿ ಎಲ್ ನರಸಿಂಹಾಚಾರ್ ಚಿನ್ನದ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ ಎ ಪದವಿಯನ್ನು ಪಡೆದ ಪ್ರತಿಭಾವಂತರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಂತಾಮಣಿ ಮತ್ತು ಸರ್ಕಾರಿ ಆರ್ಟ್ಸ್ ಕಾಲೇಜು ಬೆಂಗಳೂರು ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ ಎ ಎಸ್ ಅಧಿಕಾರಿಯಾಗಿ , ಹಂತ ಹಂತವಾಗಿ ಬಡ್ತಿ ಪಡೆದು ಕರ್ನಾಟಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದು.

ಬಾಲ್ಯದಿಂದಲೂ ಸಾಹಿತ್ಯಾಸಕ್ತರಾದ ಇವರ ಜ್ಞಾನಾರ್ಜನೆಗೆ ನೀರೆರೆದವರು ಪದವಿ ವ್ಯಾಸಂಗ ಸಮಯದಲ್ಲಿದ್ದ ಕನ್ನಡ ವಿಭಾಗದ ಖ್ಯಾತ ಉಪನ್ಯಾಸಕರು . ಅಂತೆಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ ಎ ಓದುವಾಗ ಜಿ ಎಸ್ ಶಿವರುದ್ರಪ್ಪ, ಚಂದ್ರಶೇಖರ ಕಂಬಾರ,ಬರಗೂರು ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ ಭಟ್ಟ,ಎಂ ಚಿದಾನಂದ ಮೂರ್ತಿ, ಮುಂತಾದ ಖ್ಯಾತನಾಮರಿಂದ ಪ್ರಭಾವಿತರಾಗಿ ವಿಮರ್ಶಾ ಲೇಖನ ಬರೆಯಲು ಆರಂಭಿಸಿದರು.

ಇಲ್ಲಿಯವರೆಗೆ ಇವರು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಪ್ರಕೃತಿ ಮತ್ತು ಸಂಸ್ಕೃತಿ, ಭ್ರಮರ ಮತ್ತು ಕೀಟ, ಚಕೋರ ಮತ್ತು ಚಂದ್ರಮ,ಬಿತ್ತಕ್ಕೆ ಬೇರಿನ ಚಿಂತೆ,ಎಂಬ ನಾಲ್ಕು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಭಾರತೀಯ ವಿಚಾರ ಸಾಹಿತ್ಯ,ಜಾಗತಿಕ ವಿಚಾರ ಸಾಹಿತ್ಯ, ಬಡವರ ನಗುವಿನ ಶಕ್ತಿ, ಸುವರ್ಣ ಸಾಹಿತ್ಯ ವಿಮರ್ಶೆ, ನೀರೊಳಗಣ ಬೆಳಕು,ಹೊನ್ನಾರು, ಮುಂತಾದ ಹತ್ತಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ .ಇವು ಕನ್ನಡದ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಗಳಾಗಿವೆಯೆಂದು ಅನೇಕ ವಿದ್ವಾಂಸರ ಮೆಚ್ಚುಗೆಯ ಮಾತು.

ಸಾಹಿತ್ಯ ಸಹೃದಯದ ಅತ್ಯುತ್ತಮ ಶಿಖರವಾಗಿರುವ ಇವರ ಬರಹಗಳು ಕನ್ನಡದ ಅತ್ಯುತ್ತಮ ಸಾಹಿತ್ಯದ ಸೂಕ್ಷ್ಮತೆಗಳೊಡನೆ ಓದಿನ ಹರಹಿನಲ್ಲಿ ಮಿಳಿತವಾಗಿದ್ದು‌ ತೌಲನಿಕ ವಿವೇಚನೆ ಮತ್ತು ವಿಶ್ಲೇಷಣೆಗಳಲ್ಲಿ ಯಾವುದೇ ಕೃತಿಯ ಎತ್ತರ ಹಾಗೂ ಮಿತಿಗಳನ್ನು ಗುರುತಿಸುವ ಇವರ ಸಹೃದಯ ಪ್ರತಿಭೆ ಕನ್ನಡ ಸಾರಸ್ವತ ಲೋಕದ ಅಗತ್ಯತೆ..ಆಧುನಿಕ ಕನ್ನಡ ಸಾಹಿತ್ಯ ಪ್ರಪಂಚದ ವಿಸ್ತಾರವಾದ ಹರಹನ್ನು ದಂಡಪ್ಪನವರು ಒಂದು ವಿಶಾಲ ಬಿತ್ತಿಯಲ್ಲಿ ಹಿಡಿಯಬಲ್ಲವರಾಗಿದ್ದಾರೆ ಹೀಗಾಗಿ ಇವರ ಅನ್ವಯಿಕ ವಿಮರ್ಶೆಯ ಅಧ್ಯಯನವು ಪ್ರಾಯೋಗಿಕ ವಿಮರ್ಶೆಯ ಇತಿಮಿತಿಗಳನ್ನು ಮೀರಿ ತೌಲನಿಕ ನೆಲೆಯ ಹುಡುಕಾಟದಲ್ಲಿ ತನ್ನ ಬಾಹುಗಳನ್ನು ಚಾಚಿ ಸೃಜನಶೀಲತೆಯ ವೈವಿಧ್ಯತೆಯನ್ನು ಚಾರಿತ್ರಿಕವಾಗಿಯೂ ಹುಡುಕಬಲ್ಲುದಾಗಿದೆ. ಇವರ ಲೇಖನಗಳಲ್ಲಿ , ಪ್ರತಿಭೆ ಮತ್ತು ಸಹೃದಯತೆಯ ಗುಣಗಳನ್ನು ಕಾಣಬಹುದು. ಆಧುನಿಕ ಕನ್ನಡದ,ಭಾರತೀಯ ಮತ್ತು ಜಾಗತಿಕ ಪ್ರಮುಖ ಲೇಖಕರ ಕೃತಿಗಳ ಬಗ್ಗೆ ದಂಡಪ್ಪನವರು ಬರೆದಿರುವ ಲೇಖನಗಳು ಅವರ ಓದಿನ ಹರಹು ಮತ್ತು ವಿದ್ವತ್ತನ್ನು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತವೆ.ಸಾಂಸ್ಕೃತಿಕ ಚಿಂತನೆಯ ಸ್ವರೂಪದ ವಿಮರ್ಶಾ ವಿಧಾನವನ್ನು ರೂಪಿಸಿಕೊಂಡಿರುವ ಇವರ ಕೃತಿಗಳಲ್ಲಿ ಮನುಷ್ಯರ ಮಾನಸಿಕ ಏರುಪೇರುಗಳನ್ನು ವ್ಯಾಖ್ಯಾನಿಸಿಕೊಳ್ಳುತ್ತಾ ಸಾಹಿತ್ಯದ ಸೂಕ್ಷ್ಮತೆಗಳಿಗೆ ಹಲವು ಆಯಾಮಗಳ ತೋರಣದೊಂದಿಗೆ ವಿಶಾಲವಾದ ಅಧ್ಯಯನದಿಂದ ಬೇರೆ ಬೇರೆ ವಿಮರ್ಶೆಯ ಸ್ಕೂಲ್ ಆಫ್ ಥಾಟ್ಸ್ ಗಳನ್ನು ಒಳಗೊಳ್ಳಲು ಕೂಡಾ ಸಾಧ್ಯವಾಗಿದೆ.ಕನ್ನಡದ ಮಹತ್ವದ ವಿಮರ್ಶಕರಾದ ಎಚ್ ಎಸ್ ರಾಘವೇಂದ್ರರಾವ್,ಡಾ ಬಸವರಾಜ ಕಲ್ಗುಡಿ,ಎಸ್ ಆರ್ ವಿಜಯಶಂಕರ,ಶೂದ್ರ ಶ್ರೀನಿವಾಸ ಮುಂತಾದವುರು ಇವರ ಕೃತಿಗಳನ್ನು ಮೆಚ್ಚಿ ಬರೆದಿದ್ದಾರೆ.

ಶ್ರೀಯುತ ದಂಡಪ್ಪನವರು ನಾಡಿನ ಪ್ರಮುಖ ದಿನ ಪತ್ರಿಕೆ , ವಾರ ಪತ್ರಿಕೆ, ಮಾಸಿಕ ಮತ್ತು ಸಾಹಿತ್ಯ ಪತ್ರಿಕೆಗಳಲ್ಲಿ ವಿಮರ್ಶಾ ಲೇಖನ ಬರೆಯುವುದರೊಂದಿಗೆ ಪ್ರಜಾವಾಣಿ,ಮಯೂರ,ಪತ್ರಿಕೆಗಳಲ್ಲಿ ಕೂಡಾ ಪುಸ್ತಕ ವಿಮರ್ಶೆ ಮಾಡುತ್ತಿದ್ದು ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ.

ಎಚ್ ದಂಡಪ್ಪನವರು ನಾಡಿನ ಪ್ರಮುಖ ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಟಿಗಳಲ್ಲಿ ಭಾಗವಹಿಸಿದ್ದೇ ಅಲ್ಲದೆ ವಿಶ್ವವಿದ್ಯಾಲಯ, ಅಕಾಡೆಮಿಯ ವತಿಯಿಂದ ನಡೆಯುವ ಕಮ್ಮಟಗಳಲ್ಲಿ, ಕಾಲೇಜು ಉಪನ್ಯಾಸಕರಿಗಾಗಿ ನಡೆಸುವ ಪುನರ್ಮನನ ತರಬೇತಿಯಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಸೈ ಅನಿಸಿಕೊಂಡಿದ್ದಾರೆ .

ಅಪಾರ ವಿದ್ವತ್ತನ್ನು ಗಳಿಸಿರುವ ದಂಡಪ್ಪನವರು ನಾಡಿನ ಸಾಂಸ್ಕ್ರತಿಕ ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ, ಸಾಹಿತ್ಯ ಅಕಾಡೆಮಿ,ಕನ್ನಡ ಪುಸ್ತಕ ಪ್ರಾಧಿಕಾರ,ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯ ಧನ ನೀಡುವ ಆಯ್ಕೆ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾಹಿತ್ಯ ಅಕಾಡೆಮಿ,ಮತ್ತು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಕೂಡಾ ಜವಾಬ್ದಾರಿ ನಿರ್ವಹಿಸಿದ್ದಾರೆ .

ಇವರ ಭ್ರಮರ ಮತ್ತು ಕೀಟ ಕೃತಿಗೆ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕೊಡಮಾಡುವ ಡಾ. ಇನಾಂದಾರ್ ವಿಮರ್ಶಾ ಪ್ರಶಸ್ತಿಯೊಂದಿಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದ್ದು ಉತ್ತಮ ಕೃತಿಗಳನ್ನು ಓದುಗರೆಡೆಗೆ ಆಕರ್ಷಿಸುವ ಪ್ರೇರಣಾತ್ಮಕ ವಿಮರ್ಶಾ ಬರಹಗಳ ಸರದಾರ , ಸಹೃದಯಿ ಖ್ಯಾತ ವಿಮರ್ಶಕ ಎಚ್ ದಂಡಪ್ಪನವರಿಗೆ ಈ ವರುಷದ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಸಡಗರದಲ್ಲಿ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲು ಹೆಮ್ಮೆ ಅನಿಸುತಿದೆ. ಈ ಕಾರ್ಯ ಕ್ರಮದ ಸಂಭ್ರಮ ಹೆಚ್ಚಿಸಲು ನೀವೂ ಬನ್ನಿ ನಿಮ್ಮವರನ್ನು ಕರೆ ತನ್ನಿ.

✍️ ಪೂರ್ಣಿಮಾ ಜನಾರ್ದನ್ ಕೊಡವೂರು
ಸಂಚಾಲಕರು
ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಸಮಿತಿ

 
 
 
 
 
 
 
 
 
 
 

Leave a Reply