ಕೋಟ ಶ್ರೀನಿವಾಸ ಪೂಜಾರಿಯವರಿಗೆ ದೇವರೇ ಗತಿ  

ಮದುವೆ ಫೋಟೊಗ್ರಫಿ ಮಾಡಿಕೊಂಡಿದ್ದ ಯುವಕ, ಸಂಘದ ಸಂಪರ್ಕಕ್ಕೆ ಬಂದು, ಹಿಂದುಳಿದ ಸಮುದಾಯದ ನಾಯಕನಾಗಿ ಬೆಳೆದು, ಇದೀಗ  ಕೋಟ ಶ್ರೀನಿವಾಸ ಪೂಜಾರಿ ೩ನೇ ಬಾರಿ ರಾಜ್ಯದ ಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಮುಜರಾಯಿ, ಮೀನುಗಾರಿಕಾ ಖಾತೆ ನಿರ್ವಹಿಸಿದ ಕೋಟಾಗೆ ಇದೀಗ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಒಲಿದಿದೆ. 

ದಶಕಗಳ ಹಿಂದೆ ಕೋಟ ಪೇಟೆಯಲ್ಲಿ ಸ್ವಾತಿ ಎಂಬ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೆಳೆತವಿದ್ದ ಕೋಟ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯತ್‌ನಿಂದ ವಿಧಾನ ಪರಿಷತ್ತಿನ ಮೊಗಸಾಲೆವರೆಗಿನ ಪ್ರತಿಯೊಂದು ಜನಪ್ರತಿನಿಧಿ ಸ್ಥಾನವನ್ನು ಮೆಟ್ಟಿಲನ್ನಾಗಿ ಹತ್ತಿ ಬಂದವರು. 

1993ರಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್‌ನ ಸದಸ್ಯರಾಗಿ, ಬಳಿಕ ಉಪಾಧ್ಯಕ್ಷರಾಗಿ ಅವರ ರಾಜಕೀಯ ಜೀವನ ಆರಂಭವಾಯಿತು. 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ, 2005ರಲ್ಲಿ ಜಿಲ್ಲಾ ಪಂಚಾ ಯತ್ ಸದಸ್ಯರಾಗಿ ಆಯ್ಕೆಯಾದರು.

ಅದಕ್ಕೂ ಮೊದಲು 2004ರಲ್ಲಿ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಎದುರು ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ನಡುವೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದರು. ನಂತರ 2010ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬ್ಲೆಸಿಯಸ್ ಡಿಸೋಜ ಅವರು ನಿಧನರಾದಾಗ ಆ ಸ್ಥಾನಕ್ಕೆ ಬಿಜೆಪಿ ಕೋಟ ಅವರನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿತು.

ಬಳಿಕ 2012ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ವಿ.ಎಸ್.ಆಚಾರ್ಯ ಅವರು ಹಠಾತ್ತನೇ ನಿಧನ ರಾದಾಗ, ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿ ಆಯ್ಕೆ ಯಾದರು. ತಮಗೆ ವಹಿಸಿದ್ದ ಮುಜರಾಯಿ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಉತ್ತಮ ಹೆಸರು ಗಳಿಸಿದ್ದರು.

2016ರಲ್ಲಿ ಮತ್ತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರಾಗಿಯೂ ನೇಮಕವಾದರು. 2018-19ರಲ್ಲಿ ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ಇದೀಗ 2ನೇ ಬಾರಿ ಸಂಪುಟ ಸಚಿವ ಸ್ಥಾನವನ್ನು ಪಡೆದಿದ್ದಾರೆ. 

ಕೋಟ ಶ್ರೀನಿವಾಸ ಪೂಜಾರಿ ಅವರು 7ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದ್ದಾರೆ. ಬಳಿಕ ಆರಂಭದ ದಿನಗಳಲ್ಲಿ ಕೋಟದಲ್ಲಿಫೋಟೋಗ್ರಫಿ ಸ್ಟುಡಿಯೋದಲ್ಲಿ ಕೆಲಸಕ್ಕಿದ್ದರೆ, ನಂತರ ಅವರೇ ಸ್ವತಃ ನಡೆಸುತ್ತಿದ್ದರು. ಅವರು ಸ್ವಗ್ರಾಮ ಕೋಟದಲ್ಲಿ ಪತ್ನಿ ಶಾಂತಾ, ಮಕ್ಕಳು ಸ್ವಾತಿ, ಶಶಿಧರ್ ಮತ್ತು ಶ್ರುತಿ ಅವರೊಂದಿಗೆ 2.50 ಎಕರೆ ಭತ್ತದ ಗದ್ದೆಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 

 ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ಸಪ್ತಪದಿ ಸಾಮೂಹಿಕ ಕಾರ್ಯಕ್ರಮ ಜಾರಿಗೆ ತಂದು, ಇದಕ್ಕಾಗಿ ರಾಜ್ಯದ 100 ದೇವಾಲಯಗಳನ್ನು ಆಯ್ಕೆ ಮಾಡಿ, ಹಲವಾರು ಜೋಡಿಗಳಿಗೆ ಕಂಕಣ ಭಾಗ್ಯ ಒದಗಿಸಿದ ಮೊದಲ ಸಚಿವರು. 

ತನ್ನ ಮೇಲೆ ಆರೋಪ ಬಂದಾಗ ಸ್ವತಃ ಕೊಟಾರವರೇ ತನಿಖೆ ನಡೆಸಿ ಎಂದಿದ್ದರು. ಬ್ಯಾಂಕ್‌ ಸಾಲದ ಜತೆಗೆ ಸ್ವಂತ ದುಡಿಮೆಯಿಂದ ಉಡುಪಿ ಜಿಲ್ಲೆಯ ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಗ್ರಾಮದಲ್ಲಿ 13 ಸೆಂಟ್ಸ್‌ ಜಾಗದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸುತ್ತಿದ್ದೇನೆ.

ಆದರೆ ಕೆಲವರು 6 ಕೋಟಿ ರೂ. ವೆಚ್ಚದಲ್ಲಿ ಮನೆ ಕಟ್ಟಿಸುತ್ತಿರುವುದಾಗಿ ಸುಳ್ಳು ಮಾಹಿತಿ ಹರಡಿಸುತ್ತಿದ್ದು, ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ. 

ಮುಜರಾಯಿ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯ ಹರಿಕಾರ ಎಂದೇ ಜನಬಿಂಬಿತರಾಗಿದ್ದ ಶ್ರೀನಿವಾಸ ಪೂಜಾರಿಯವರಿಗೆ ಈ ಭಾರಿಯೂ ಮುಜರಾಯಿ ಸಚಿವ ಸ್ಥಾನ ಸಿಗುವುದರಲ್ಲಿ ಸಂಶಯ ಇಲ್ಲ.    

 
 
 
 
 
 
 
 
 
 
 

Leave a Reply