ಫೋಟೋಗ್ರಾಪರ್ ತರದ ವರ.. ಮುರಿದು ಬಿದ್ದ ಮದುವೆ 

ಜೀವನದ ಕೆಲವೊಂದು ಸಿಹಿ, ಖುಷಿ ನೆನಪುಗಳು ಫೋಟೋಗಳ ಮೂಲಕ ಎಲ್ಲರ ಬಳಿ ಭದ್ರವಾಗಿರುತ್ತವೆ. ಅದರಲ್ಲೂ ವಿಶೇಷ ಸಂದರ್ಭ ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ಎಲ್ಲರೂ ತಪ್ಪದೇ ಫೋಟೋ ತೆಗೆಸುವುದು ಇತ್ತೀಚೆಗೆ ಮಾಮೂಲಾಗಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ಛಾಯಾಗ್ರಾಹಕನನ್ನು ಕರೆತರಲು ಸಾಧ್ಯವಾಗದ ಕಾರಣ ವಧು ತನ್ನ ಮದುವೆಯನ್ನು ರದ್ದುಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾನ್ಪುರದ ದೇಹತ್ ಜಿಲ್ಲೆಯ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ರೈತನ ಮಗಳ ವಿವಾಹ ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ವಧುವಿನ ಮನೆಯವರು ಜಯಮಾಲ್(ಮಾಲಾರ್ಪಣೆ) ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದರು. ಮೆರವಣಿಗೆಯೊಂದಿಗೆ ವರ ಬಂದ ಕೂಡಲೇ ಎಲ್ಲರನ್ನು ಒಟ್ಟಿಗೆ ಆಹ್ವಾನಿಸಿ ಮದುವೆ ಮಂಟಪಕ್ಕೆ ತೆರಳಿದರು. ಜೈಮಾಲ್‌ ಇನ್ನೇನು ನಡೆಯಬೇಕು ಎನ್ನುವಾಗ ಹುಡುಗನ ಗುಂಪಿನಲ್ಲಿ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಇಲ್ಲದಿರುವುದನ್ನು ಕಂಡ ವಧು ಕೋಪ ಮಾಡಿಕೊಂಡಿದ್ದಾರೆ.

ಕೂಡಲೇ ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳಿ ಮದುವೆ ಮಂಟಪದಿಂದ ಇಳಿದು ಪಕ್ಕದ ಮನೆಗೆ ಹೋಗಿ ಕುಳಿತಳು. ಎಷ್ಟೇ ಅಂಗಲಾಚಿದರೂ ಮದುವೆಗೆ ಬಿಲ್‌ ಕುಲ್‌ ಒಪ್ಪಕೊಳ್ಳದೆ, ಇಂದು ನನ್ನ ಮದುವೆಯ ಬಗ್ಗೆ ತಲೆಕೆಡಿಸಿಕೊಳ್ಳದ ಆತ ನಾಳೆ ನನ್ನ ಬಗ್ಗೆ ಕಾಳಜಿ ವಹಿಸಿ ನನ್ನ ಜೀವನದುದ್ದಕ್ಕೂ ಸಂತೋಷವಾಗಿ ನೋಡಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾಳೆ.

ಕೊನೆಗೆ ಈ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಲ್ಲಿ ಎರಡೂ ಕುಟುಂಬಸ್ಥರು ನೀಡಿದ್ದ ಉಡುಗೊರೆಗಳನ್ನು ವಾಪಸ್‌ ಪಡೆದರು. ಇತ್ತ ಮದುವೆಯಿಲ್ಲದೆ ವರ ಬರಿಗೈಯಲ್ಲಿ ಹಿಂದಿರುಗಿದ್ದಾನೆ.

 
 
 
 
 
 
 
 
 
 
 

Leave a Reply