“ಕಾಂತಾರ” ಚಿತ್ರಕ್ಕೆ ಕೃತಿ ಚೌರ್ಯದ ಕಿರಿಕಿರಿ 

ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಕೇಸ್ ಹಾಕಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
 
ಇದಕ್ಕೆ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಸೃಷ್ಟಿ ಆಗಿದೆ. ‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. 
ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಈಗ ಕೇಸ್ ಹಾಕಲು ನಿರ್ಧರಿಸಿದ್ದಾರೆ.
 
‘ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವ ರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ .
 
ಹಾಡಿನ ಹಕ್ಕುಗಳನ್ನು ಕುರಿತಂತೆ ಕಾಂತಾರ ತಂಡದವರು ನಮಗೆ ಯಾವುದೇ ಕ್ರಿಡಿಟ್ ನೀಡಿಲ್ಲ ಹಾಗೂ ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮಗೆ ಬೆಂಬಲ ನೀಡಬೇಕು ಎಂದು ನಮ್ಮ ಕೇಳುಗರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ.
 
ಮ್ಯೂಸಿಕ್ ಕಾಪಿ ರೈಟ್ ಉಳಿಸುವ ಬಗ್ಗೆ ಎಲ್ಲ ಸಂಗೀತ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡ ಪೋಸ್ಟ್ ಮಾಡಿದೆ.
 
 
 
 
 
 
 
 
 
 
 

Leave a Reply