ಕಲೆಯ ಬದಲಾವಣೆ ಒಳಿತಿನ ಆಶಯ ಹೊಂದಿರಲಿ -ಕೆ. ಜಯಪ್ರಕಾಶ ಹೆಗ್ಡೆ

“ವಿದ್ವತ್ತು ಮತ್ತು ಜ್ಞಾನ ಭಂಡಾರದ ವಿಷಯದಲ್ಲಿ ಯಕ್ಷಗಾನ ಕಲಾವಿದರು ಸ್ನಾತಕೋತ್ತರ ಪದವಿ ಪಡೆದವರಿಗಿಂತ ಎಷ್ಟೋ ಮೇಲು. ಇಂದಿನ ಕೆಲವು ಯಕ್ಷಗಾನ ಪ್ರದರ್ಶನ ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಕಲೆಯಲ್ಲಿ ಬದಲಾವಣೆ ಬೇಕು, ಆದರೆ ಆ ಬದಲಾವಣೆ ಒಳಿತಿನ ಆಶಯ ಹೊಂದಿರಬೇಕು. ಆ ದಿಸೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಶ್ರೀಧರ ಹಂದೆಯವರ ಮಕ್ಕಳ ಮೇಳ ಆದರ್ಶದ ಬೀಜ ಬಿತ್ತಿದೆ. ಅದು ಎಲ್ಲರಲ್ಲಿಯೂ ಸಾಕಾರಗೊಳ್ಳಬೇಕು” ಎಂದು ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಫೆಬ್ರುವರಿ ೧೧ ರ ಆದಿತ್ಯವಾರ ಸಂಜೆ ಪಟೇಲರ ಮನೆ ಆವರಣದಲ್ಲಿ ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜಿಸಿದ ಎರಡು ದಿವಸಗಳ ‘ಕಲೋತ್ಸವ ೨೦೨೪-ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ ಕೋಟ ಸುರೇಶ್ ದಂಪತಿಗಳಿಗೆ ಅವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಂಬಯಿಯ ಓ.ಎನ್.ಜಿ.ಸಿ.ಯ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬನ್ನಾಡಿ ನಾರಾಯಣ ಆಚಾರ್ ಉಡುಪ ಸಂಸ್ಮರಣೆ ಮಾತುಗಳನ್ನಾಡಿದರು.

ಮಕ್ಕಳ ಮೇಳ ಟ್ರಸ್ಟ್ನ ಅಧ್ಯಕ್ಷ ಬಲರಾಮ ಕಲ್ಕೂರ ಅಧ್ಯಕ್ಷತೆವಹಿಸಿದ್ದರು. ಮಯ್ಯಾಸ್ ಬೆಂಗಳೂರಿನ ಪಿ. ಸದಾನಂದ ಮಯ್ಯ, ಗೀತಾನಂದ ಪೌಂಢೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ಯಕ್ಷಗಾನ ಪೋಷಕರೂ ಉದ್ಯಮಿಗಳು ಆದ ಕೃಷ್ಣಮೂರ್ತಿ ಮಂಜರು, ಮಣಿಪಾಲ ಕೆನರಾ ಬ್ಯಾಂಕ್‌ನ ಸಹಯಕ ಮುಖ್ಯ ಮಹಾ ಪ್ರಬಂಧಕರಾದ ವಿಷ್ಣು ವಿನೋದ್ ಜೋಷಿ, ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ್ ಎಮ್. ಉಡುಪ, ಶ್ರೀಮತಿ ಕಲ್ಕೂರ, ಶ್ರೀಕಾಂತ ಉಡುಪ ವಿನಿತಾ ಸುಜಯೀಂದ್ರ, ಕಾವ್ಯ ಉಪಸ್ಥಿತರಿದ್ದರು.

ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜನಾರ್ದನ ಹಂದೆ ವಂದಿಸಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಅಶೋಕ್ ಅಚಾರ್ಯ ಅವರಿಂದ ಲಘು ಸಂಗೀತ-ನಿನಾದ ಮತ್ತು ಮಂಗಳೂರಿನ ನಂದಗೋಕುಲ ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply