ಜೆರೋಸಾ ಶಾಲೆಯಲ್ಲಿ ಧರ್ಮ ನಿಂದನೆ; ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು!

ನಗರದ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಮಕ್ಕಳಿಗೆ ಧರ್ಮ ನಿಂದನೆಯ ಪಾಠ ಮಾಡಿದ್ದಾರೆ ಎನ್ನುವ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರು ಮತ್ತು ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು ಭೇಟಿಯಾಗಿ ತೀವ್ರ ತರಾಟೆಗೆತ್ತಿಕೊಂಡಿದ್ದು, ಶಿಕ್ಷಕಿಯನ್ನು ವಜಾ ಮಾಡದಿದ್ದರೆ ಧರಣಿ ಕೂರುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಜಿಪಂ ಕಚೇರಿ ಆವರಣದಲ್ಲಿರುವ ಡಿಡಿಪಿಐ ರಾಮಚಂದ್ರ ನಾಯಕ್ ಅವರನ್ನು ಭೇಟಿಯಾಗಲು ಬಜರಂಗದಳ ಮುಖಂಡರು ಆಗಮಿಸಿದ್ದರು. ಜಿಪಂ ಗೇಟ್ ನಲ್ಲಿ ಪೊಲೀಸರು ಅಡ್ಡಗಟ್ಟಿದ್ದು, ಒಳಗೆ ಹೋಗದಂತೆ ತಡೆದಿದ್ದಾರೆ. ಆನಂತರ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೊರಗಡೆ ಬಂದಿದ್ದು ಸೇರಿದ್ದ ಪೋಷಕರು, ಬಜರಂಗದಳ ಪ್ರಮುಖರು ಮತ್ತು ಇಬ್ಬರು ಶಾಸಕರ ಮನವಿ ಆಲಿಸಿದ್ದಾರೆ. ಈ ವೇಳೆ, ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕೂಡಲೇ ಆ ಶಿಕ್ಷಕಿಯನ್ನು ಶಾಲೆಯಿಂದ ವಜಾ ಮಾಡಬೇಕು. ಸಣ್ಣ ಮಕ್ಕಳು ಮನೆಗೆ ಬಂದು ರಾಮನ ಬಗ್ಗೆ ಅವಹೇಳ ಮಾಡಿರುವುದನ್ನು ಹೇಳಿದ್ದಾರೆ ಅಂದ್ರೆ, ಇನ್ನೇನು ತನಿಖೆಯ ಅಗತ್ಯವಿದೆ. ಅಂಥ ಶಿಕ್ಷಕಿಯರೇ ಇರಬಾರದು, ಹಿಂದು ವಿರೋಧಿ ಭಾವನೆ ಬಿತ್ತುವ ಶಾಲೆಯ ಮಾನ್ಯತೆಯನ್ನೂ ರದ್ದು ಮಾಡಬೇಕು ಎಂದು ಆಗ್ರಹ ಮಾಡಿದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಸಣ್ಣ ಮಕ್ಕಳಲ್ಲಿ ಹಿಂದು ವಿರೋಧಿ ಭಾವನೆ ಬಿತ್ತುವ ಕೆಲಸ ಆಗ್ತಾ ಇದೆ. ಮಕ್ಕಳಿಗೆ ಪುಸ್ತಕದ ಪಾಠ ಕಲಿಸುವುದು ಬಿಟ್ಟು ಈ ರೀತಿಯ ಪಾಠ ಮಾಡುವ ಅಗತ್ಯ ಇದೆಯಾ.. ನಾವು ರಾಜಕೀಯ ನಾಯಕರಾಗಿ ಅಥವಾ ಶಾಸಕರಾಗಿ ಇಲ್ಲಿ ಬಂದಿಲ್ಲ. ನಾನೊಬ್ಬ ಹಿಂದುವಾಗಿ ಬಂದಿದ್ದೇನೆ. ಶಾಲೆಯಲ್ಲಿ ಕಲಿಸಿದ ಅನುಭವವೂ ನನಗಿದೆ, ಯಾವ ಮಕ್ಕಳಿಗೂ ಅವರ ಧರ್ಮ ನೋಡಿ ಪಾಠ ಮಾಡುವ ಕ್ರಮ ಇಲ್ಲ. ನೀವು ತನಿಖೆ ಏನಿದ್ದರೂ ಆಮೇಲೆ ಮಾಡಿ, ಮೊದಲು ಆ ಶಿಕ್ಷಕಿಯನ್ನು ಅಮಾನತು ಮಾಡಿ ಎಂದು ಆಗ್ರಹ ಮಾಡಿದ್ದಾರೆ.

ಡಿಡಿಪಿಐ ರಾಮಚಂದ್ರ ನಾಯಕ್ ಪ್ರತಿಕ್ರಿಯಿಸಿ, ಶಾಲೆಗೆ ಬಿಇಓ ಅವರನ್ನು ಕಳಿಸಿದ್ದೇನೆ, ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದಾಗ, ಶಾಸಕರು ಸಿಟ್ಟಾಗಿದ್ದಾರೆ. ನೀವು ಬಿಇಓ ಅವರನ್ನು ಶಾಲೆಗೆ ಕಳಿಸಿ ಏನು ಮಾಡುತ್ತಿದ್ದೀರಿ, ಶಾಲೆಯ ಶಿಕ್ಷಕರನ್ನೇ ಇಲ್ಲಿ ಕರೆಸಿಕೊಳ್ಳಿ. ಕಳ್ಳರನ್ನು ಕದ್ದಿದ್ದೀರಾ ಎಂದು ಕೇಳಿದರೆ, ಹೌದು ಎನ್ನುತ್ತಾರೆಯೇ ಎಂದು ವೇದವ್ಯಾಸ ಕಾಮತ್ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಅಹವಾಲು ಹೇಳಿಕೊಂಡಿದ್ದಾರೆ. ನಮ್ಮ ಮಕ್ಕಳು ಮನೆಗೆ ಬಂದು ಅಳುತ್ತಿದ್ದಾರೆ, ಟೀಚರ್ ಬಗ್ಗೆ ಹೇಳಿದರೆ, ಫೈಲ್ ಮಾಡುತ್ತಾರೆಂದು ಹೇಳುತ್ತಿದ್ದಾರೆ. ರಾಮನನ್ನು ಅವಹೇಳನ ಮಾಡಿ ವಿಷ ಬೀಜ ಬಿತ್ತುವ ಕೆಲಸ ಯಾಕೆ.. ಹಿಂದು ಧರ್ಮದ ಬಗ್ಗೆ ಅವಹೇಳ ಮಾಡಿ, ಸಣ್ಣ ಮಕ್ಕಳಿಗೆ ಹೇಳಿದರೆ, ಮುಂದೆ ಅವರ ಮನಸ್ಸಲ್ಲಿ ಅದೇ ಇರುತ್ತದಲ್ಲಾ.. ನೀವು ಆ ಶಿಕ್ಷಕರನ್ನು ಇಲ್ಲಿ ಕರೆಯಿರಿ. ನಮ್ಮ ಮಕ್ಕಳನ್ನೂ ನಿಮ್ಮ ಮುಂದೆ ಕರೆತರುತ್ತೇವೆ ಎಂದಿದ್ದಾರೆ.

ಕೊನೆಗೆ, ವಿಎಚ್ ಪಿ ಮುಖಂಡರು ಮತ್ತು ಶಾಸಕರು ಶಿಕ್ಷಣ ಇಲಾಖೆ ಅಧಿಕಾರಿಯನ್ನು ರೈಟ್ ಲೆಫ್ಟ್ ಮಾಡಿದ್ದು, ನಾವು ಒಂದು ದಿನದ ಟೈಮ್ ಕೊಡುತ್ತೇವೆ. ಅದರ ಒಳಗೆ ಶಿಕ್ಷಕಿಯನ್ನು ವಜಾ ಮಾಡಬೇಕು. ಇಲ್ಲದೇ ಇದ್ದರೆ, ನಾಳೆ ಇಲ್ಲಿಯೇ ಧರಣಿ ಕೂರುತ್ತೇವೆ. ಹಿಂದು ಭಾವನೆಗೆ ಧಕ್ಕೆ ತರುವುದನ್ನು ನಾವು ಸಹಿಸಲ್ಲ. ಶಾಲೆಯಲ್ಲಿ ಮಕ್ಕಳಿಗೆ ರಾಮನನ್ನು ಕಲ್ಲು ಅನ್ನೋದಕ್ಕೆ ಇವರಿಗೇನ್ರೀ ಅಧಿಕಾರ. ಶಾಲೆಯಲ್ಲಿ ಅಯೋಧ್ಯೆ, ಪ್ರಧಾನಿ ಮೋದಿ ಬಗ್ಗೆ ಅವಹೇಳನ ಮಾಡಿದ್ದಾರಂದ್ರೆ, ಇದರ ಹಿಂದೆ ಪಿತೂರಿ ಇದ್ದಂತಿದೆ. ಕೂಡಲೇ ಆ ಶಾಲೆಯ ಮಾನ್ಯತೆ ರದ್ದುಪಡಿಸಿ. ಕಾಂಗ್ರೆಸ್ ಸರಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದರೆ, ನಾವು ಅವಕಾಶ ಕೊಡಲ್ಲ. ಇಡೀ ಜಿಲ್ಲೆಯಲ್ಲಿ ಪ್ರತಿಭಟನೆ ಎಬ್ಬಿಸುತ್ತೇವೆ. ಅದಕ್ಕೆ ಕಾಂಗ್ರೆಸ್ ಸರಕಾರ ಮತ್ತು ಶಿಕ್ಷಣ ಇಲಾಖೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ, ಅದೇ ಶಾಲೆಯಲ್ಲಿ ಕಲಿತು ಈಗ ಪಿಯುಸಿಯಲ್ಲಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ಅನುಭವ ಹೇಳಿಕೊಂಡಿದ್ದು, ಸಿಸ್ಟರ್ ಪ್ರಭಾ ಸೇರಿದಂತೆ ಹಲವರು ಇದೇ ರೀತಿಯ ಧರ್ಮ ನಿಂದನೆಯ ಮಾತು ಹೇಳಿಕೊಡುತ್ತಾರೆ. ಹಿಂದಿನಿಂದಲೂ ಇದು ನಡೆದುಬಂದಿದೆ. ನಾವು ಭಯಪಟ್ಟು ಇದನ್ನೆಲ್ಲ ಹೊರಗಡೆ ಹೇಳಿಕೊಂಡಿಲ್ಲ ಎಂದರು. ಪೋಷಕರೊಬ್ಬರು ಮಾತನಾಡಿ, ಗೋಧ್ರಾ ಘಟನೆಯ ಬಗ್ಗೆ ಹೇಳಿದ್ದಾರಂತೆ. ರೇಪ್, ಹೊಟ್ಟೆ ಕತ್ತರಿಸುವುದನ್ನು ಹೇಳಿದ್ದಾರಂತೆ. ಅಯೋಧ್ಯೆ ರಾಮ ಬರೀ ಕಲ್ಲಂತೆ. ಇದನ್ನೆಲ್ಲ ಯಾಕೆ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply