ಹ್ಯಾರೋನ ಕಲಾರಸಿಕರ ಮನಸೂರೆಗೊಂಡ ಯಕ್ಷಗಾನ ಪ್ರದರ್ಶನ

ಇದೇ ನವೆಂಬರ್ ೧೯ಕ್ಕೆ ಲಂಡನ್ ನ ಹ್ಯಾರೋ ನಗರದ ಮೇಯರ್ ರಾಮ್ ಜಿ ಕಾಂಜಿ ಚೌಹಾಣ್ ಅವರ ನೇತೃತ್ವದಲ್ಲಿ, ಝೋರೊಆಸ್ಟ್ರಿಯನ್ (Zoroaustian Centre) ಸೆಂಟರ್ ನಲ್ಲಿ ನಡೆದ ವಾರ್ಷಿಕ ದಕ್ಷಿಣ ಏಷ್ಯಾ ಪರಂಪರೆ ಹಾಗೂ ಸಾಂಸ್ಕೃತಿಕ ಹಬ್ಬದಲ್ಲಿ(South Asian Heritage Cultural Festival) ಇದೇ ಮೊದಲನೇ ಬಾರಿಗೆ ಕರ್ನಾಟಕದ ಹೆಮ್ಮೆ ‘ಯಕ್ಷಗಾನ’ ಪ್ರದರ್ಶನವನ್ನು ಆಯೋಜಿಸಲಾಗಿತ್ತು . ಸುಮಾರು 600ಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಮೂಲದ ಹಾಗೂ ಸ್ಥಳೀಯ ಪಾಶ್ಚಿಮಾತ್ಯ ಪ್ರೇಕ್ಷಕರೆಲ್ಲರ ಒಕ್ಕೊರಲಿನ ಅಭಿಪ್ರಾಯ ‘ ಇಂಥ ಅದ್ಭುತ ಪ್ರದರ್ಶನವನ್ನು ನಾವು ಈ ಮೊದಲು ಕಂಡಿರಲಿಲ್ಲ.. ದಯವಿಟ್ಟು ಪ್ರತೀ ವರ್ಷ ನಮ್ಮ ಕಾರ್ಯಕ್ರಮದಲ್ಲಿ ನಿಮ್ಮ ಪ್ರದರ್ಶನ ಮಾಡಿ ಕೊಡಿ’.. 

ಬಯಲಾಟ ಯುಕೆ ಹಾಗೂ ಯಕ್ಷಸಂಜೀವ ಉಡುಪಿ ಅವರ ಸಹಯೋಗದಲ್ಲಿ ಕಳೆದ ಒಂದು ವರ್ಷದಲ್ಲಿ ಯುಕೆಯ ಹಲವಾರು ಕಡೆ ನಡೆದ ಪ್ರದರ್ಶನಗಳಲ್ಲಿ 10ನೆಯ ಪ್ರದರ್ಶನ ಇದು. ‘ಶೂರ್ಪನಖಿ ನಾಸಿಕ ಛೇದನ’ ಹೆಸರಿನ ಪ್ರಸಂಗದ ಪರಿಕಲ್ಪನೆ, ಪ್ರಸಾದನ , ವಸ್ತ್ರವಿನ್ಯಾಸ ಗುರು ಶ್ರೀ.ಸಂಜೀವ ಸುವರ್ಣರ ಹಿರಿಯ ಮಗ ಚಿ. ಶಿಶಿರ ಸುವರ್ಣರ ನೇತೃತ್ವದಲ್ಲಿ ನಡೆದರೆ, ಪ್ರಸಂಗಕ್ಕೆ ಸಂಗೀತ ಕಲ್ಪಿಸಿಕೊಟ್ಟವರು ಗುರುಗಳ ಕಿರಿಯ ಮಗ ಚಿ. ಶಂತನು ಸುವರ್ಣ. ಶ್ರೀರಾಮನ ಪಾತ್ರದಲ್ಲಿ ಮಂಜುನಾಥ್ ಮಚಾನಿ, ಲಕ್ಷ್ಮಣ ಪಾತ್ರದಲ್ಲಿ ಅವರ ಶ್ರೀಮತಿ ರಶ್ಮಿ ಮಚಾನಿ ಹಾಗೂ ಶೂರ್ಪನಖಿ ಪಾತ್ರಧಾರಿ ಗಿರೀಶ್ ಪ್ರಸಾದ್ ಅವರ ಅಭಿನಯ ಜನಮನಸೂರೆಗೊಂಡಿತು . ಈ ಎಲ್ಲ ಪಾತ್ರಧಾರಿಗಳು ಯುನೈಟೆಡ್ ಕಿಂಗ್ಡಮ್ ನ ನಿವಾಸಿಗಗಳು ಹಾಗೂ ಬಯಲಾಟ ಯುಕೆಯ ಹವ್ಯಾಸಿ ಕಲಾವಿದರು ಎಂಬುದು ವಿಶೇಷ. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ಹಿಂದಿನ ದಿನ.. ಮಿಲ್ಟನ್ ಕೀನ್ಸ್ ನಗರದಲ್ಲಿ ಚಿ. ಶಿಶಿರ ಸುವರ್ಣ ಅವರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಅವರ ಕೃಷಿಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಎಂಬುದು ವಿಶೇಷ..  

ಈ ಎಲ್ಲ ಕಲಾವಿದರ ಕಲಾಪ್ರೇಮ ಇನ್ನೂ ಹೆಚ್ಚು ಕಲಾರಸಿಕರಿಗೆ ತಲುಪಲಿ.. ಯಕ್ಷಗಾನ ವಿಶ್ವಗಾನವಾಗಲಿ.. ಯಕ್ಷಗಾನಮ್ ಗೆಲ್ಗೆ.. ಯಕ್ಷಗಾನಮ್ ಬಾಳ್ಗೆ …

 
 
 
 
 
 
 
 
 
 
 

Leave a Reply