`ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿದ ನೆಟ್ಟಿಗರು!

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾದ‌ ಕ್ಲೈಮ್ಯಾಕ್ಸ್‌ ಅಂತೂ ದೇಶ-ವಿದೇಶಗಳೆಲ್ಲೆಡೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಂತೆಯೇ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ತಂಡಗಳ ಕದನವೂ ಅಂತಿಮ ಘಟ್ಟದಲ್ಲಿ ರೋಚಕತೆಯಿಂದ ಕೂಡಿತ್ತು. ಗೆಲುವಿಗಾಗಿ ಕೊನೆ ಎರಡು ಓವರ್‌ನಲ್ಲಿ ವಿರಾಟ್ ಕೊಹ್ಲಿ ತೋರಿದ ಪ್ರದರ್ಶನವು ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್‌ನಷ್ಟೇ ರೋಚಕವಾಗಿತ್ತು ಎಂದು ಹೋಲಿಸಿ ನೆಟ್ಟಿಗರು ಟ್ಟಿಟ್ಟರ್‌ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಕಾಂತಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಸ್ಯಾಂಡಲ್ ವುಡ್‌ಗೆ (SandalWood) ಮಾತ್ರ ಸೀಮಿತ ಆಗಿದ್ದ ರಿಷಬ್, ‘ಕಾಂತಾರ’ದ ಕಾಂತಿಯಿಂದ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಮೆರಿಕದಲ್ಲೂ ತೆರೆ ಕಂಡಿರುವ ಕಾಂತಾರ ಎಂಟೂವರೆ ಕೋಟಿ ಬಾಚಿದೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ `ಡಿವೈನ್ ಸ್ಟಾರ್’ ಎಂದು ಬಿರುದು ಕೊಟ್ಟಿದ್ದು, ಅದೇ ಹೆಸರಿನಿಂದ ಕರೆಯುತ್ತಿದ್ದಾರೆ.

ಕಾಂತಾರ ಸಿನಿಮಾದ ಕೊನೆಯ 20 ನಿಮಿಷ ಅತ್ಯಂತ ರೋಚಕತೆಯಿಂದ ಕೂಡಿದೆ. ಕ್ಲೈಮ್ಯಾಕ್ಸ್‌ ನಲ್ಲಿ ತುಳುನಾಡಿನ ಸಂಸ್ಕೃತಿ ಅನಾವರಣಗೊಳಿಸುವ ಜೊತೆಗೆ, ಭೂತಾರಾಧನೆಯನ್ನ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯವಂತೂ ಮೈಜುಮ್ಮೆನ್ನಿಸುವಂತಿದೆ.

ಅದೇ ರೀತಿ ಏಷ್ಯಾಕಪ್ ಮೂಲಕ ಫಾರ್ಮ್ಗೆ ಮರಳಿರುವ ಕೊಹ್ಲಿ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ಅಬ್ಬರಿಸಿದ್ದಾರೆ. ಇಂದಿನ ಇಂಡೋ-ಪಾಕ್ ಕದನದಲ್ಲಿ ಕೊನೆಯ 20 ನಿಮಿಷ ಕಿಂಗ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಕಾಂತಾರ ಕ್ಲೈಮ್ಯಾಕ್ಸ್‌ ನಷ್ಟೇ ರೋಚಕವಾಗಿತ್ತು ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದೆ.

ಕಾಂತಾರ ಸಿನಿಮಾದಲ್ಲಿ ಭೂತಕೋಲ ವೇಶ ಧರಿಸಿ ನಟ `ಓ..’ ಎಂದು ಕೂಗುವ ದೃಶ್ಯದ ಚಿತ್ರದೊಂದಿಗೆ, ತಂಡದ ಗೆಲುವಿನ ಸಂಭ್ರಮದ ವೇಳೆ ವಿರಾಟ್ ಕೊಹ್ಲಿ `ಓ..’ ಎಂದು ಕೂಗುತ್ತಿರುವ ಫೋಟೋವನ್ನು ಹೋಲಿಕೆ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟಿ20 ವಿಶ್ವಕಪ್ ಆರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಪಾಕ್ ತಂಡ ಟೀಂ ಇಂಡಿಯಾಕ್ಕೆ 160ರನ್‌ಗಳ ಗುರಿ ನೀಡಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆದರೆ ವಿರಾಟ್‌ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ 82 ರನ್ ಸಿಡಿಸಿ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply