ಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತ ; ಮೂವರು ಭಾರತೀಯ ವಿದ್ಯಾರ್ಥಿಗಳು ಸಾವು!

ಅಮೇರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಯುನೈಟೆಡ್‌ ಸ್ಟೇಟ್ಸ್‌ ನ ವೆಸ್ಟರ್ನ್‌ ಮ್ಯಾಸಚೂಸೆಟ್ಸ್ ನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರೊಂದಕ್ಕೆ ಬೇರೊಂದು ವಾಹನ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರೇಮ್‌ ಕುಮಾರ ರೆಡ್ಡಿ ಗೋಡಾ (27 ವರ್ಷ), ಪಾವನಿ ಗುಲ್ಲಪಲ್ಲಿ (22 ವರ್ಷ),ಹಾಗೂ ಸಾಯಿ ನರಸಿಂಹ ಪಟಂಶೆಟ್ಟಿ (22 ವರ್ಷ) ಎಂಬವರೇ ಮೃತ ವಿದ್ಯಾರ್ಥಿಗಳು. ಬೆಳಗಿನ ಜಾವದಲ್ಲಿ ವಿದ್ಯಾರ್ಥಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ವಾಹನವೊಂದು ಮುಖಾಮುಖಿಯಾಗಿ ಕಾರಿಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ ಎರಡು ವಾಹನಗಳಲ್ಲಿದ್ದ ಐದು ವಿದ್ಯಾರ್ಥಿಗಳು ಹಾಗೂ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಮ್ಯಾಸಚುಸೆಟ್ಸ್‌ ಪೋಲೀಸರು ಮಾಹಿತಿ ನೀಡಿದ್ದಾರೆ.

ಮೃತಪಟ್ಟಿರುವ ಇಬ್ಬರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇನ್ನೋರ್ವ ವಿದ್ಯಾರ್ಥಿ ಸೇಕ್ರೆಡ್‌ ಹಾರ್ಟ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮನೋಜ್‌ ರೆಡ್ಡಿ ದೊಂಡ , ಶ್ರೀಧರ್‌ ರೆಡ್ಡಿ ಚಿಂತಕುಟಾ , ವಿಜಿತ್‌ ರೆಡ್ಡಿ ಗುಮ್ಮಲ ಮತ್ತು ಹಿಮಾ ಐಶ್ವರ್ಯ ರೆಡ್ಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರ್ಕ್‌ ಶೈರ್‌ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ . ಇನ್ನೂ ವಾಹನ ಚಾಲಕ 46 ವರ್ಷ ಪ್ರಾಯದ ಅರ್ಮಾಂಡೋ ಬೌಟಿಸ್ಟಾ ಕ್ರೂಜರ್‌ ಅವರನ್ನು ಚಿಕಿತ್ಸೆಗಾಗಿ ಫೇರ್‌ ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ.

ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಕಾರುಗಳ ಮುಖಾಮುಖಿ ಢಿಕ್ಕಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಈಗಾಗಲೇ ಅಪಘಾತದ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೇ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

 
 
 
 
 
 
 
 
 
 
 

Leave a Reply