ಉಡುಪಿ: ಅಜ್ಜನ ಪ್ರಾಣ ಉಳಿಸಿದ ರೈಲ್ವೇ ಪೊಲೀಸ್ ಸಿಬ್ಬಂದಿ.

ಉಡುಪಿ : ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಕಾಲು ಜಾರಿ ಬಿದ್ದು ವೃದ್ಧರೊಬ್ಬರನ್ನು ರೈಲ್ವೇ ಪೊಲೀಸ್ ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಪ್ಲಾಟ್‌ಫಾರಂ ನಂ.1 ರಲ್ಲಿ ರೈಲು ನಂ.12620 ಚಲಿಸಲಾರಂಭಿಸಿದಾಗ ಹಿರಿಯ ವ್ಯಕ್ತಿಯೊಬ್ಬರು ರೈಲಿನಿಂದ ಇಳಿಯಲು ಪ್ರಯತ್ನಿಸಿದ್ದಾರೆ.‌ ಆಗ ಕಾಲು ಜಾರಿ ಅವರು ಬಿದ್ದರೂ ರೈಲಿನ ಹ್ಯಾಂಡಲ್‌ನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರು. ಇದರಿಂದ ರೈಲು ಒಂದಷ್ಟು ದೂರು ಅವರನ್ನು ಎಳೆದುಕೊಂಡು ಹೋಗಿದೆ.

ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಸಜೀರ್ ತಕ್ಷಣ ಧಾವಿಸಿ ಬಂದು ಅವರನ್ನು ರಕ್ಷಿಸಿದ್ದಾರೆ.

ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು ವ್ಯಕ್ತಿಯ ಸಂಬಂಧಿಗಳು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಚಾರಣೆಯ ವೇಳೆ ಈ ವ್ಯಕ್ತಿಯ ಹೆಸರು ಕುಟ್ಟಿ ಕುಂದನ್ ಎಂದು ಗೊತ್ತಾಗಿದ್ದು ಅವರು ಪೆರ್ಡೂರು ನಿವಾಸಿ ಎಂದು ತಿಳಿದಿದೆ.

ತನ್ನ ಮಗಳನ್ನು ಬೀಳ್ಕೊಡಲು ಅವರು ನಿಲ್ದಾಣಕ್ಕೆ ಬಂದಿದ್ದು, ರೈಲು ಚಲಿಸತೊಡಗಿದಾಗ ಇಳಿಯುವ ಗಡಿಬಿಡಿಯಲ್ಲಿ ಈ ಘಟನೆ ನಡೆದಿತ್ತು. ಕುಟ್ಟಿ ಕುಂದನ್ ಅವರನ್ನು ರಕ್ಷಿಸಿದ್ದಕ್ಕಾಗಿ ಕುಟುಂಬಿಕರು ಸುಜೀರ್ ಅವರನ್ನು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply