ಹಿಜಾಬ್ ವಿವಾದದಲ್ಲಿ ಪ್ರಾಂಶುಪಾಲರ ವರ್ತನೆ ಅಮಾನವೀಯ: ಅಬ್ದುಲ್ ಅಝೀಝ್ ಉದ್ಯಾವರ್ ಆಕ್ರೋಶ

ಕುಂದಾಪುರ : ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತಿದ್ದ ಕಾರಣಕ್ಕೆ ಫೆಬ್ರವರಿ 3ರ ಗುರುವಾರದಂದು ಕಾಲೇಜಿನ ಗೇಟಿನ ಒಳಗಡೆ ಬಿಡದೆ ತಡೆದಿದ್ದು ತೀವ್ರ ಅಮಾನವೀಯ ಎಂದು ಅಬ್ದುಲ್ ಅಝೀಝ್ ಉದ್ಯಾವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಂಶುಪಾಲರ ಹುದ್ದೆಗೆ ದೊಡ್ಡ ಗೌರವವಿದೆ. ಒಂದು ವರ್ಚಸ್ಸಿದೆ. ಒಂದು ಘನತೆಯಿದೆ. ಗೌರವಾನ್ವಿತ ಪ್ರಾಂಶುಪಾಲರು ಅದನ್ನೆಲ್ಲಾ ಗಾಳಿಗೆ ತೂರಿ ಕುಂದಾಪುರದ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಮಾತ್ರವಲ್ಲ ತಾನೊಬ್ಬ ಪ್ರಾಂಶುಪಾಲರೆನ್ನುವುದನ್ನೂ ಮರೆತು ಬಿಜೆಪಿ ಶಾಸಕರು ನೇಮಿಸಿದ ಗೇಟ್ ಕೀಪರ್ ರೀತಿ ವರ್ತಿಸುತ್ತಿರುವುದು ಆ ಹುದ್ದೆಗೆ ತೋರುವ ದೊಡ್ಡ ಅಗೌರವ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರ ಮತ್ತು ಪ್ರಾಂಶುಪಾಲರ ನಡುವೆ ಆದ ವಾಗ್ವಾದದ ನಡುವೆ ಪ್ರಾಂಶುಪಾಲರು ಪದೇ ಪದೇ ಶಾಸಕರಿಂದ ಅನುಮತಿ ಇಲ್ಲ ಎಂದು ಹೇಳುತ್ತಿದ್ದುದು ಏನನ್ನು ಸೂಚಿಸುತ್ತದೆ?. ಪ್ರಾಂಶುಪಾಲರು ಬಿಜೆಪಿಯ ಏಜೆಂಟ್ ನ ಹಾಗೆ ಏಕೆ ವರ್ತಿಸುತ್ತಿದ್ದಾರೆ? ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದುದು ಪ್ರಾಂಶುಪಾಲರ ಆದ್ಯ ಕರ್ತವ್ಯ ಮತ್ತವರ ಜವಾಬ್ದಾರಿ. ಆದರೆ ಕುಂದಾಪುರದ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಖುದ್ದು ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯೆಯಿಂದ ವಂಚಿತರಾಗುವ ಹಾಗೆ, ಮುಸ್ಲಿಂ ವಿದ್ಯಾರ್ಥಿನಿಯರು ಗೇಟಿನ ಒಳಗಡೆ ಬಾರದಂತೆ ಕಾವಲು ಕಾಯುತ್ತಿದ್ದಾರೆ. “ನೀವು ಹಾಕುವ ತಲೆವಸ್ತ್ರದ ಕಾರಣ ನಮ್ಮ ಕಾಲೇಜಿನ ಒಳಗೆ ಪ್ರವೇಶವಿಲ್ಲ” ಎಂದು ಗೇಟಿನ ಒಳಗಡೆಯೂ ಬಿಡದೆ ವಿದ್ಯಾರ್ಥಿನಿಯರನ್ನು ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಕೂರಿಸಿದ್ದು ಪ್ರಾಂಶುಪಾಲರ ಹುದ್ದೆಗೆ ತಾನು ಅನರ್ಹ ಪ್ರಾಂಶುಪಾಲ ರಾಮಕೃಷ್ಣ ಸಾಬೀತುಪಡಿಸಿದ್ದಾರೆ. ಈ ನಡೆಯನ್ನು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷರು ಖಂಡಿಸಿದ್ದಾರೆ.

 
 
 
 
 
 
 
 
 
 
 

Leave a Reply