ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಮೌಲ್ಯಾಧಾರಿತ ತೀರ್ಪು: ಗುರುಪ್ರಸಾದ್ ಶೆಟ್ಟಿ ಕಟಪಾಡಿ

ಹಿಜಾಬ್ ಗೂ ಶಿಕ್ಷಣಕ್ಕೂ ಹೊಂದಾಣಿಕೆ ಸಲ್ಲದು. ಉಚ್ಚ ನ್ಯಾಯಾಲಯ ಹಿಜಾಬ್ ಪ್ರಕರಣದಲ್ಲಿ ನೀಡಿದ ತೀರ್ಪು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಉತ್ತಮ ಮೌಲ್ಯಾಧಾರಿತ ತೀರ್ಪು ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.

ಶಿಕ್ಷಣವು ವಿದ್ಯಾರ್ಥಿಗಳ ಜೀವನದ ದಾರಿದೀಪ. ತಮ್ಮ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಒಂದು ಸುಗಮ ಮಾರ್ಗ. ಸಂವಿಧಾನಾತ್ಮಕ, ದೇಶದ ರಾಷ್ಟ್ರೀಯತೆ ಮತ್ತು ಏಕತೆಯ ಪ್ರತೀಕವಾಗಿರುವ ಶಿಕ್ಷಣವನ್ನು ವಿದ್ಯಾರ್ಥಿ ಸಮುದಾಯ ಹಾಗೂ ದೇಶವಾಸಿಗಳು ಅತೀ ಧನ್ಯತೆಯಿಂದ ಗೌರವಿಸಬೇಕಾಗಿದೆ.

ಹಿಜಾಬ್ ಪ್ರಕರಣ ಉಡುಪಿಯಲ್ಲಿ ನಡೆದ ವಸ್ತ್ರ ಸಂಹಿತೆಯ ಒಂದು ಸರಳವಾದ ವಿಷಯವಾಗಿತ್ತು. ಆದರೆ ಕಾಣದ ಕೈಗಳಿಂದ ಈ ವಿಚಾರ ಇಡೀ ದೇಶ ಹಾಗೂ ಹೊರ ದೇಶಗಳಲ್ಲಿ ಗೊಂದಲವನ್ನು ಸೃಷ್ಠಿಸಿ, ನ್ಯಾಯಾಲಯದ ಮೆಟ್ಟಲೇರಿ ಇದೀಗ ಉಚ್ಛ ನ್ಯಾಯಾಲಯದ ತೀರ್ಪಿನಿಂದ ಸುಖಾಂತ್ಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಸಮಾನತೆ ಮತ್ತು ಸಮನ್ವಯತೆಯನ್ನು ಸಾಧಿಸುವ ಒಂದು ಸಾಧನವಾಗಿದೆ. ಜೀವನದ ಮೌಲ್ಯಾಧಾರಿತ ಘಟ್ಟಗಳನ್ನು ಹಾದು ಭವಿಷ್ಯದ ಗುರಿಯನ್ನು ತಲುಪುವಲ್ಲಿ ಶಿಕ್ಷಣದ ಪಾತ್ರ ಬಹಳ ಹಿರಿದಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಚ್ಚಾಶಕ್ತಿಯಿಂದ ತೊಡಗಿಸಿಕೊಳ್ಳುವಂತಹ ಸಂದರ್ಭದಲ್ಲಿ ಇಂತಹ ಅನಪೇಕ್ಷಿತ ಘಟನೆಗಳು ಅದಕ್ಕೆ ಅಡ್ಡಿಯಾಗಬಾರದು.

ಹಿಜಾಬ್ ಪ್ರಕರಣದಂತಹ ಘಟನೆಗಳಿಂದ ಯಾವುದೇ ಒಂದು ಧರ್ಮ, ಪಂಥಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ ಅದರಿಂದ ದೇಶದ ಆರೋಗ್ಯಕರ ವಾತಾವರಣಕ್ಕೆ ಧಕ್ಕೆಯುಂಟಾಗುವುದು ಸಹಜ. ಆದುದರಿಂದ ಹಿಜಾಬ್ ಹಾಗೂ ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯ ನೀಡಿರುವ ನ್ಯಾಯಯುತ ತೀರ್ಪನ್ನು ಎಲ್ಲರೂ ಸ್ವಾಗತಿಸಿ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡುವುದು ಇಂದಿನ ಅಗತ್ಯತೆಯಾಗಿದೆ.

ನಡೆದ ಎಲ್ಲಾ ಅನಪೇಕ್ಷಿತ ಘಟನೆಗಳನ್ನು ಮರೆತು, ಯಾವುದೇ ಬಾಹ್ಯ ಸಂಘಟನೆಗಳ ಅಥವಾ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೇ ವಿದ್ಯಾರ್ಥಿಗಳು ಯಥಾವತ್ತಾಗಿ
ಶಾಲಾ ಕಾಲೇಜುಗಳಿಗೆ ತೆರಳಿ ಉತ್ತಮ ಶಿಕ್ಷಣವನ್ನು ಪಡೆದು ತಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ
ತೊಡಗಿಸಿಕೊಳ್ಳುವಂತಾಗಲಿ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply