ಕ್ಲಾಸಿನಲ್ಲಿ ಹಿಜಾಬ್ ತೆಗೆದು ಪಾಠ ಆಲಿಸಿದರೆ ಆಗದು ಅಧರ್ಮ~ ರಹೀಮ್ ಉಜಿರೆ.

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಸೋಮವಾರ ಬರಬಹುದು ಎಂಬುದು ನನ್ನ ಊಹೆ. ಹಿಜಾಬ್ ಪರವಾಗಿ ತೀರ್ಪು ಬಂದರೆ ಸಂತೋಷ. ವಿರುದ್ಧವಾಗಿ ಬಂದರೆ?

ವಿರುದ್ಧವಾಗಿ ಬಂದರೂ ನಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಬಾರದು ಎಂಬುದು ನನ್ನ ಮಹದಾಸೆ. ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎಂದು ಹಠ ಹಿಡಿದು ವಿದ್ಯಾರ್ಥಿನಿಯರ TC ತೆಗೆದು ಕಾಲೇಜು ಬಿಡಿಸುವ ದುಸ್ಸಾಹಸಕ್ಕೆ ಯಾವ ಪೋಷಕರೂ ಕೈಹಾಕಬಾರದಾಗಿ ವಿನಂತಿಸುತ್ತೇನೆ.

ಹೈಕೋರ್ಟ್ ಅಂತಿಮ ತೀರ್ಪಿನ ಬಳಿಕವೂ ಪ್ರಶ್ನಿಸಲು ಸುಪ್ರೀಂ ಕೋರ್ಟ್ ಇದೆ. ಅಲ್ಲಿ ವಕೀಲರು ಮೇಲ್ಮನವಿ ಸಲ್ಲಿಸಬಹುದು.

ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ,ಹಿಜಾಬ್ ಗಾಗಿ ಹಠ ಹಿಡಿಯುವುದು ಮತ್ತು ಹೈಕೋರ್ಟ್ ಅಂತಿಮ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡುವ ಕೆಲಸಕ್ಕೆ ಯಾರೂ‌ ಕೈಹಾಕಬಾರದು.

ಬಹಳ ವರ್ಷಗಳ ನಂತರ ನಮ್ಮ ಸಮುದಾಯದ ಹುಡುಗಿಯರು ಕಾಲೇಜು ಮೆಟ್ಟಿಲು ಹತ್ತಿ ಉನ್ನತ ವ್ಯಾಸಂಗ ಮಾಡಲು ಮನಸು ಮಾಡುತ್ತಿದ್ದಾರೆ.

ಹಲವು ಕಾಲೇಜುಗಳಿಗೆ ಹೋಗಿ ಅನೇಕ ಮುಸ್ಲಿಂ ಯುವತಿಯರನ್ನು ಸಂದರ್ಶಿಸಿದ್ದೇನೆ. ಅವರ ಸ್ಪಷ್ಟವಾದ , ಖಚಿತವಾದ ಮಾತುಗಳು ನನ್ನಲ್ಲಿ ಭರವಸೆ ಮೂಡಿಸಿದೆ.

ಕಳೆದ ಎರಡು ವಾರಗಳಿಂದ ಅವರು ಟಿವಿಗಳಲ್ಲಿ ದಿಟ್ಟವಾಗಿ ಮಾತನಾಡುತ್ತಿರುವುದನ್ನು ನೋಡಿದ ಮೇಲೂ ನೀವು ಅವರ ವಿದ್ಯಾಭ್ಯಾಸ (ಹಿಜಾಬ್ ಕಾರಣಕ್ಕೆ) ಮೊಟಕುಗೊಳಿಸಿದರೆ ನಿಮ್ಮನ್ನು ಯಾರೂ ಕಾಪಾಡಲು ಸಾಧ್ಯವಿಲ್ಲ.

ಪಿಯುಸಿ , ಎಸ್ಸೆಸ್ಸೆಲ್ಸಿ ಫೆಲಾದ ಕೆಲ ಹುಡುಗರು ಈಗಾಗಲೇ ನಮಗೆ ಧರ್ಮ ಮುಖ್ಯ ಎಂದು ಹೇಳುತ್ತಿರುವುದನ್ನು ಗಮನಿಸಿದ್ದೇನೆ.
ಅವರ ಮಾತಿಗೆ ಸೊಪ್ಪು ಹಾಕಬೇಕಿಲ್ಲ.

ಕೋರ್ಟ್ ತೀರ್ಪಿಗೆ ತಲೆಬಾಗಿ , ತರಗತಿಯೊಳಗೆ ಒಂದೆರಡು ಗಂಟೆ ಹಿಜಾಬ್ ತೆಗೆದಿರಿಸಿ ಪಾಠ ಕೇಳುವುದು ಖಂಡಿತ ಅಧರ್ಮ ಎನಿಸದು ಎಂಬುದನ್ನು ಖಚಿತವಾಗಿ ಹೇಳಬಲ್ಲೆ. ಒಂದು ವೇಳೆ ಯಾರಾದರೂ ನಾಳೆ ಹೈಕೋರ್ಟ್ ಅಂತಿಮ ತೀರ್ಪನ್ನು ಪಾಲನೆ ಮಾಡದೆ ಮತ್ತೆ ಹಠ ಮುಂದುವರೆಸಿದರೆ ಭವಿಷ್ಯದಲ್ಲಿ ಇಡೀ ಸಮುದಾಯ ಹಲವು ರೀತಿಯಲ್ಲಿ ತೊಂದರೆಗೊಳಗಾಗಲಿದೆ ಎಂಬ ಎಚ್ಚರ ಎಲ್ಲರಲ್ಲೂ ಇರಲಿ.

 
 
 
 
 
 
 
 
 
 
 

Leave a Reply