ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆ ಘಟನೆ ವೈದ್ಯಕೀಯ ಕ್ಷೇತ್ರಕ್ಕೇ ಅವಮಾನ: ಗೀತಾ ವಾಗ್ಳೆ

ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಗರ್ಭಿಣಿ ಮಹಿಳೆ ಮತ್ತು ಆಕೆಯ ಅವಳಿ ಶಿಶುಗಳು ಮರಣ ಹೊಂದಿದ ಘಟನೆ ಇಡೀ ವೈದ್ಯಕೀಯ ಕ್ಷೇತ್ರಕ್ಕೇ ಅವಮಾನ.ಕೇವಲ ಆಧಾರ್ ಕಾರ್ಡ್ ಮತ್ತು ತಾಯಿ ಕಾರ್ಡ್ ಇಲ್ಲವೆನ್ನುವ ಒಂದು ಕ್ಷುಲ್ಲಕ ಕಾರಣಕ್ಕೆ ತುಂಬು ಗರ್ಭಿಣಿ ಮಹಿಳೆಯನ್ನು ಹೆರಿಗೆಗೆ ಆಸ್ಪತ್ರೆಯಲ್ಲಿ ದಾಖಲು ಮಾಡದೇ ಆಕೆಯ ಹಾಗೂ ಆಕೆಯ ಅವಳಿ ಮಕ್ಕಳ ಸಾವಿಗೆ ಕಾರಣವಾದ ಆಸ್ಪತ್ರೆಯ ವರ್ತನೆ ಅಮಾನವೀಯವಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಹೇಳಿದ್ದಾರೆ.ತುಂಬು ಗರ್ಭಿಣಿಯರು ವಾಹನದಲ್ಲಿ ಪಯಣಿಸುವ ಸಂದರ್ಭದಲ್ಲಿ , ರೈಲುಗಳಲ್ಲಿ, ವಿಮಾನಗಳಲ್ಲಿ ಪಯಣಿಸುವ ಸಂದರ್ಭದಲ್ಲಿ ಆಕಸ್ಮಾತ್ ಹೆರಿಗೆ ನೋವು ಕಾಣಿಸಿಕೊಂಡಲ್ಲಿ, ಆಸ್ಪತ್ರೆಗೆ ತಲುಪುವ ಮೊದಲೇ ಹೆರಿಗೆಯಾದಲ್ಲಿ ವಾಹನದ ಸಿಬ್ಬಂದಿಗಳು,ಸಹ ಪ್ರಯಾಣಿಕರು ಆಕೆಗೆ ಸಹಾಯಹಸ್ತ ಚಾಚುವುದರ ಮೂಲಕ ಮಾನವೀಯತೆಯನ್ನು ಮೆರೆದ ಅನೇಕ ಘಟನೆಗಳು ನಮ್ಮ ಮುಂದಿರುವಾಗ ಯಕಶ್ಚಿತ್ ಜನರನ್ನು ಕಾಪಾಡುವುದನ್ನೇ ತಮ್ಮ ಗುರಿಯಾಗಿಟ್ಟುಕೊಳ್ಳಬೇಕಾಗಿರುವ ಆಸ್ಪತ್ರೆಗಳೇ ನಿಷ್ಕರುಣಿಗಳಾಗಿ ಜನಸಾಮಾನ್ಯರಲ್ಲಿ ರಕ್ತ ಕಣ್ಣೀರು ಬರುವಂತೆ ಅಮಾನವೀಯವಾಗಿ ವರ್ತಿಸುತ್ತಿರುವುದು ದೊಡ್ಡ ದುರಂತ.ಈ ಘಟನೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ತೋರಿಸುತ್ತದೆ.ತನ್ನ ಅಧೀನ ಸಂಸ್ಥೆಗಳ ಮೇಲೆ ಸರಕಾರದ ಹತೋಟಿ ತಪ್ಪುತ್ತಿರುವುದರ ಸಂಕೇತವಾಗಿದೆ.ಕೆಲವೊಂದು ಕಚೇರಿ , ಆಸ್ಪತ್ರೆಗಳಲ್ಲಿ ಸಿಬಂದಿಗಳು ತಮ್ಮ ಮನಬಂದಂತೆ ವರ್ತಿಸುತ್ತಿದ್ದಾರೆ.ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡಾ ತುಂಬು ಗರ್ಭಿಣಿಗೆ ಚಿಕಿತ್ಸೆ ಕೊಡದೇ ಆಕೆ ಉಡುಪಿಗೆ ಬಂದು ಚಿಕಿತ್ಸೆ ಪಡೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಆದರೆ ತುಮಕೂರು ಘಟನೆಯಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯ ಎಲ್ಲೆ ಮೀರಿದೆ.ಆರೋಗ್ಯ ಸಚಿವರೇ,ಈ ಘಟನೆ ಬಗ್ಗೆ ತಾವು ಏನೆನ್ನುತ್ತೀರಿ? ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡದೇ ಆಕೆಯನ್ನು ಮತ್ತು ಆಕೆಯ ಅವಳಿ ಮಕ್ಕಳನ್ನು ಈ ಜಗತ್ತಿನಿಂದಲೇ ದೂರಮಾಡುವಂತಹ ಪರಿಸ್ಥಿತಿಯನ್ನು ತಂದಿತ್ತ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೀರಾ? ವೈದ್ಯೋ ನಾರಾಯಣ ಹರಿ: ಎಂಬಂತೆ ವೈದ್ಯರು ಭಗವಂತನ ಅವತಾರ ಎಂದು ನಂಬಿಕೊಂಡು ಬಂದಿರುವ ನಾವು ಈ ಘಟನೆಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು?ಆ ಅಮಾಯಕ ಶಿಶುಗಳು ಜಗದ ಬೆಳಕನ್ನೇ ಕಾಣುವ ಮೊದಲು ಅವುಗಳನ್ನು ಇಲ್ಲವಾಗಿಸಿದ ಹಾಗೂ ತನ್ನ ಗರ್ಭದಲ್ಲಿದ್ದ ಮುದ್ದಾದ ಅವಳಿ ಮಕ್ಕಳು ಈ ಭೂಮಿಗೆ ಬರಬೇಕು, ಅವುಗಳನ್ನು ಮುದ್ದಿಸಿ ಬೇಕೆಂಬ ಕಾತರದಿಂದ ಸಹಾಯಕ್ಕಾಗಿ ಆಸ್ಪತ್ರೆಗೆ ಬಂದಾಕೆಯನ್ನು ರಕ್ತ ಸ್ರಾವದಿಂದ ಸಾಯುವುದನ್ನು ನೋಡುತ್ತಾ ನಿಂತ ಆ ರಾಕ್ಷಸ ರೂಪದ ಸಿಬಂದಿಗಳಿಗೆ ನೇಣು ಶಿಕ್ಷೆಗೆ ಒಳಪಡಿಸುವುದೇ ಸೂಕ್ತ ಕ್ರಮವಾಗಿದೆ.ಒಂದಲ್ಲ ಎರಡಲ್ಲ ಮೂರು ಕೊಲೆಗಳು ನಡೆದಿವೆ.ಈ ಕೊಲೆಗಳ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡು ಆರೋಗ್ಯ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು.ಹಾಗೂ ಸರ್ಕಾರ ಕೂಡಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಯಾರಾದರೂ ಸತ್ತರೆ ಅವರ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಹೆಣ ಸುಡಲೂ ಬಿಡೋದಿಲ್ಲ ಎನ್ನುವ ಕಾಲ ದೂರವಿಲ್ಲ.ಇಂತಹ ದಿನಗಳು ಬಾರದಂತೆ ಈಗಿಂದೀಗಲೇ ಎಚ್ಚೆತ್ತುಕೊಳ್ಳಿ ಎಂದು ಗೀತಾ ವಾಗ್ಳೆ ವ್ಯಂಗ್ಯವಾಡಿದ್ದಾರೆ.

 
 
 
 
 
 
 
 
 
 
 

Leave a Reply