ವಿದ್ಯುತ್‌ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತೆ – ವೆರೋನಿಕಾ ಕರ್ನೆಲಿಯೋ

ಉಡುಪಿ: ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಮುಂತಾದ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ರಾಜ್ಯದ ಜನತೆಗೆ ವಿದ್ಯುತ್ ದರ ಪ್ರತಿ ಯೂನಿಟ್ ವಿದ್ಯುತ್‌ ಬೆಲೆಯನ್ನು ಸರಾಸರಿ 35 ಪೈಸೆ ಏರಿಕೆಯನ್ನು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿಜವಾದ ವಿಚಾರದಲ್ಲಿ ಜನರ ಪರವಾಗಿರಬೇಕಾಗಿದ್ದ ಸರಕಾರ ಇಂದು ಹಿಜಾಬ್‌, ಹಲಾಲ್‌ ಎಂಬ ವಿಷಯ ಹಿಡಿದುಕೊಂಡು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇದಿನೇ ಪ್ರತಿ ಒಂದು ವಸ್ತುಗಳ ಬೆಲೆ ಏರಿಕೆ ನಡುವೆ ಜನರು ಜೀವನ ನಡೆಸುವುದೇ ಒಂದು ದೊಡ್ಡ ಸವಾಲಾಗಿದೆ. ಬಡಜನರು ಕೂಲಿಕಾರ್ಮಿಕರು ಜೀವನ ನಡೆಸುವುದು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುವಂತಾಗಿದೆ. ಪೆಟ್ರೋಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಈಗಾಗಲೇ ಜನರ ಸಂಕಷ್ಟದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್‌ ಬೆಲೆಯನ್ನು ಸರಾಸರಿ 35 ಪೈಸೆ ಏರಿಕೆ ಮಾಡುವ ಮೂಲಕ ಇದೀಗ ಜನರಿಗೆ ಕರೆಂಟ್ ಶಾಕ್ ಕೊಟ್ಟಂತಾಗಿದೆ.

ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಿ ಬಡ ಜನರಿಗೆ ಬೆಂಬಲಿಸಬೇಕಾದ ಸರಕಾರ ವಿಪರೀತವಾಗಿ ಅಗತ್ಯ ವಸ್ತುಗಳು, ವಿದ್ಯುತ್‌ ಪ್ರತಿಯೊಂದರ ದರ ಹೆಚ್ಚಳ ಮಾಡುವದರಲ್ಲೇ ಆಸಕ್ತಿ ತೋರುತ್ತಿದೆ. ಮೆಸ್ಕಾಂನ ಒರ್ವ ನಿವೃತ್ತ ಎಂಜಿನಿಯರ್‌ ಹೇಳುವ ಪ್ರಕಾರ ರಾಜ್ಯ ಸರಕಾರ ಹೊರ ರಾಜ್ಯಗಳಿಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್‌ ಪೊರೈಕೆ ಮಾಡಿ ತನ್ನ ರಾಜ್ಯದ ಗ್ರಾಹಕರಿಗೆ ಹೆಚ್ಚು ಬೆಲೆ ಪಡೆಯುತ್ತಿದೆ. ಹಾಗಿದ್ದರೆ ನಮ್ಮ ರಾಜ್ಯದ ಜನರಿಂದ ಹೆಚ್ಚುವರಿ ತೆರಿಗೆ ವಸೂಲಿ ಮಾಡಿ ಮತ್ತಷ್ಟು ಬರೆ ಎಳೆಯುತ್ತಿರುವುದು ಎಷ್ಟು ಸರಿ? ಜನರ ಪರವಾಗಿ ದನಿಯೆತ್ತ ಬೇಕಾಗಿದ್ದ ಸರಕಾರ ಅನಗತ್ಯ ವಿಚಾರಗಳಲ್ಲೇ ಹೆಚ್ಚಿನ ಕಾಲ ಹರಣ ಮಾಡುತ್ತಿರುವುದು ನಾಚಿಕೆಗೇಡು.

‘ಡಬಲ್‌ ಎಂಜಿನ್‌ (ಕೇಂದ್ರ-ರಾಜ್ಯ) ಸರ್ಕಾರದಲ್ಲಿ ಜನರ ಬವಣೆಗಳು ದೂರಾಗುವ ಬದಲಿಗೆ, ಹೆಚ್ಚಾಗುತ್ತಲೇ ಇವೆ. ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜನರ ಜೇಬಿಗೆ ಕತ್ತರಿ ಹಾಕುವ ಹುನ್ನಾರವನ್ನು ನಡೆಸಿವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಒಳ್ಳೆಯ ದಿನಗಳು ಬರಲೇ ಇಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯದಲ್ಲಿ ಸರ್ಕಾರ ತೊಡಗಿದೆ’̤ ‘ನಿರೀಕ್ಷೆ ಮಾಡದಂತಹ ದುಬಾರಿ ದಿನಗಳನ್ನು ತಂದಿಟ್ಟಿದ್ದಕ್ಕಾಗಿ, ಮುಂಬರುವ ಚುನಾವಣೆಯಲ್ಲಿ ಜನರಿಗೆ ತಕ್ಕಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply