15 ಲಕ್ಷ ಹಣದೊಂದಿಗೆ ಸರ್ಕಲ್​ ಇನ್ಸ್​ಪೆಕ್ಟರ್​ ಪರಾರಿ

ಕರ್ನೂಲ್​ ತಾಲೂಕು ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಲ್​ ಇನ್ಸ್​ಪೆಕ್ಟರ್​ ಒಬ್ಬರು ಠಾಣೆಯಲ್ಲಿದ್ದ 15 ಲಕ್ಷ ರೂಪಾಯಿ ಹಣದ ಜತೆಗೆ ಪರಾರಿಯಾಗಿರುವ ಘಟನೆ ನಡೆದಿದ್ದು, ಕರ್ನೂಲ್​ ಜಿಲ್ಲಾ ಪೊಲೀಸ್​ ವಿಭಾಗ ತಲೆಮರೆಸಿಕೊಂಡಿರುವ ಪೊಲೀಸ್​ ಇನ್ಸ್​ಪೆಕ್ಟರ್​ ಪತ್ತೆಗೆ ಶುಕ್ರವಾರ ಬಲೆ ಬೀಸಿದ್ದಾರೆ.

ಮೂಲಗಳ ಪ್ರಕಾರ, ಸರ್ಕಲ್​ ಇನ್ಸ್​ಪೆಕ್ಟರ್​ ಹೆಸರು ಕಂಬಗಿರಿ ರಾಮುಡು ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ನಗರದ ಹೊರವಲಯದ ಪಂಚಲಿಂಗಲ ಚೆಕ್​ಪೋಸ್ಟ್​ ಬಳಿ ತಮಿಳುನಾಡು ಮೂಲದ ಸತೀಶ್​ ಬಾಲಕೃಷ್ಣನ್​ ಎಂಬುವರಿಗೆ ಸೇರಿದ ವಾಹನವೊಂದರ ತಪಾಸಣೆ ಮಾಡುವಾಗ ವಶಕ್ಕೆ ಪಡೆಯಲಾದ ಒಟ್ಟು 75 ಲಕ್ಷ ರೂ. ಹಣದಲ್ಲಿ 15 ಲಕ್ಷ ರೂ. ಹಣವನ್ನು ತೆಗೆದುಕೊಂಡು ರಾಮುಡು ಪರಾರಿಯಾಗಿದ್ದಾರೆ.

ವಶಕ್ಕೆ ಪಡೆದ ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಸರ್ಕಲ್​ ಇನ್ಸ್​ಪೆಕ್ಟರ್​ ರಾಮುಡು, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಸತೀಶ್ ಬಾಲಕೃಷ್ಣನ್ ಗುರುವಾರ ತಡರಾತ್ರಿ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಸತೀಶ್​ ಬಾಲಕೃಷ್ಣನ್​ ಅವರು ತಮಿಳುನಾಡಿನ ತಿರ್ಪ್ಪುರ್​ ಮೂಲದವರು. ಭಾನುವಾರ ಖಾಸಗಿ ಬಸ್​ ಒಂದರಲ್ಲಿ ಹೈದರಾಬಾದ್​ನಿಂದ ಮದುರೈಗೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ಪಂಚಲಿಂಗಲ ಚೆಕ್​ಪೋಸ್ಟ್​ ಬಳಿ ಬಸ್​ ತಡೆದು ತಪಾಸಣೆ ಮಾಡುವಾಗ ಸತೀಶ್​ ಬಳಿ 75 ಲಕ್ಷ ರೂ. ಭಾರೀ ಮೊತ್ತ ಇದ್ದಿದ್ದರಿಂದ ನಗದು ಸಮೇತ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆಂದು ಕರ್ನೂಲ್ ತಾಲೂಕು ಪೊಲೀಸರಿಗೆ ಒಪ್ಪಿಸಲಾಯಿತು.

ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸತೀಶ್​ ಬಳಿಯಿತ್ತು. ಆದರೂ, ಸರ್ಕಲ್​ ಇನ್ಸ್​ಪೆಕ್ಟರ್ 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸತೀಶ್​ ಕೊಡಲು ನಿರಾಕರಿಸಿದಾಗ, ತಮ್ಮ ಸರ್ಕಾರಿ ಸಿಮ್​ ಅನ್ನು ಕಳಚಿ ಪೊಲೀಸ್​ ಠಾಣೆಯಲ್ಲೇ ಇಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ.

ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ವಿರುದ್ಧ ಅವರು ಕೆಲಸ ಮಾಡುವ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ವಿಶೇಷ ತಂಡವನ್ನು ರವಾನಿಸಲಾಗಿದೆ. ​

ಕರ್ನೂಲ್ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರು ಮರ್ಕಿ ಎಪಿಸೋಡ್ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ.

 
 
 
 
 
 
 
 
 
 
 

Leave a Reply