ಸಂಸತ್ತಿನಲ್ಲಿ ಮತ್ತೆ ಭದ್ರತಾ ವೈಫಲ್ಯ; ಸಂಸದರು ಅಧಿವೇಶನದಲ್ಲಿ ಇರುವಾಗಲೇ ಸ್ಮೋಕ್ ಬಾಂಬ್ ದಾಳಿ!

2001ರಲ್ಲಿ ಪಾರ್ಲಿಮೆಂಟ್ ದಾಳಿಗೈದ (ಡಿಸೆಂಬರ್ 13) 22ನೇ ವಾರ್ಷಿಕ ದಿನವೇ ಮತ್ತೆ ಸಂಸತ್ತಿನಲ್ಲಿ ಭದ್ರತಾ ವೈಫಲ್ಯ ಆಗಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಸತ್ತಿನ ಕೆಳ ಮನೆಯಲ್ಲಿ ಸಂಸದರು ಅಧಿವೇಶನದಲ್ಲಿ ಇರುವಾಗಲೇ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದಾರೆ. 

ಸಂಸತ್ತಿನ ಶೂನ್ಯ ವೇಳೆಯಲ್ಲಿ ಸಂಸದರು ತಮ್ಮ ಸೀಟಿನಲ್ಲಿ ಕುಳಿತಿರುವಾಗಲೇ ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಸಂಸತ್ ಹಾಲಿಗೆ ಜಂಪ್ ಮಾಡಿದ್ದಾರೆ. ಈ ವೇಳೆ, ಹಳದಿ ಬಣ್ಣದ ಹೊಗೆ ಆವರಿಸಿದ್ದು ಅವರಿಬ್ಬರು ಸ್ಮೋಕ್ ಬಾಂಬ್ ಎಸೆದಿದ್ದಾರೆ ಎನ್ನಲಾಗುತ್ತಿದೆ. 

ಸಂಸತ್ತಿನಲ್ಲಿ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಇರಲಿಲ್ಲ. ಸಂಸತ್ತು ಚಾಲನೆಯಲ್ಲಿದ್ದಾಗಲೇ ಘಟನೆ ನಡೆದಿರುವುದರಿಂದ ಸಂಸದರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಕೂಡಲೇ ಅಪರಿಚಿತ ವ್ಯಕ್ತಿಗಳು ಪರಾರಿಯಾಗಲು ಯತ್ನಿಸಿದ್ದು ಪಾರ್ಲಿಮೆಂಟ್ ಸಿಬಂದಿ ಅವರನ್ನು ಸೆರೆಹಿಡಿದಿದ್ದಾರೆ. ಸ್ಮೋಕ್ ಬಾಂಬ್ ದಾಳಿ ನಡೆಸಿರುವುದು ಪಾರ್ಲಿಮೆಂಟ್ ಲೈವ್ ಟಿವಿಯಲ್ಲಿ ನೇರವಾಗಿಯೇ ಪ್ರಸಾರವಾಗಿದೆ. ಕೆಲವೇ ಕ್ಷಣಗಳಲ್ಲಿ ಸಂಸತ್ತಿನ ಅಧಿವೇಶನವನ್ನು ಸ್ಥಗಿತಗೊಳಿಸಲಾಗಿದೆ. 

ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಪಾರ್ಲಿಮೆಂಟ್ ಹೊರಗಡೆ ಸಂಸತ್ ದಾಳಿಯ 22ನೇ ವಾರ್ಷಿಕ ದಿನದ ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ಅನ್ಮೋಲ್ ಮತ್ತು ಹರ್ಯಾಣ ಮೂಲದ ಮಹಿಳೆ ನೀಲಂ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಸ್ಮೋಕ್ ದಾಳಿ ಮಾಡಿದ ಇಬ್ಬರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಒಳನುಗ್ಗಿದ್ದಾರೆ. ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಸದನದ ಒಳಗೆ ನುಗ್ಗಿದ್ದಾರೆ. ಹಳದಿ ಬಣ್ಣ ಟಿಯರ್​ ಗ್ಯಾಸ್​​ ಮಾದರಿಯ ಹೊಗೆಯನ್ನು ಬಿಟ್ಟು ಸಂಸದರನ್ನು ಗಾಬರಿಗೊಳಿಸಿದ್ದಾರೆ. ಕೂಡಲೇ ಭದ್ರತಾ ಸಿಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ. 2001ರ ಸಂಸತ್ ದಾಳಿಯ ದಿನವೇ ನಾವು ಮತ್ತೆ ದಾಳಿ ಮಾಡುತ್ತೇವೆ, ನಿಮ್ಮ ಪ್ರಜಾಪ್ರಭುತ್ವದ ಬುಡ ಅಲ್ಲಾಡಿಸುತ್ತೇವೆ ಎಂದು ಇತ್ತೀಚೆಗೆ ಪಂಜಾಬ್ ಮೂಲದ ಖಲಿಸ್ತಾನ್ ಉಗ್ರರು ಬೆದರಿಕೆ ಹಾಕಿದ್ದರು. ಅದೀಗ ನಿಜ ಆಗಿರುವುದಲ್ಲದೆ, ಭಾರತದ ಸಂಸತ್ತಿನ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ.

 
 
 
 
 
 
 
 
 
 
 

Leave a Reply