ಉಡುಪಿಯ ಸಾಮಾಜಿಕ ಕಾರ್ಯಕರ್ತರ ಸೇವೆಯ ಫಲಶ್ರುತಿ

ಉಡುಪಿ : 45 ದಿನಗಳ ಹಿಂದೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿರುವ ಆಂಧ್ರ ಮೂಲದ ಅನು (29) ಎಂಬ ಮಹಿಳೆಯ ವಾರೀಸುದಾರರು ಪತ್ತೆಯಾಗದ ಕಾರಣ ತಾತ್ಕಾಲಿಕವಾಗಿ ಮಂಜೇಶ್ವರದ ಸ್ನೇಹಾಲಯಕ್ಕೆ ವಿಶು ಶೆಟ್ಟಿ ದಾಖಲಿಸಿದ್ದಾರೆ.

ಮಹಿಳೆಗೆ 45 ದಿನಗಳ ಕಾಲ ಚಿಕಿತ್ಸೆ ನೀಡಿ ಬಾಳಿಗಾ ಆಸ್ಪತ್ರೆ ವಿಶೇಷ ರಿಯಾಯಿತಿ ಸೇವೆ ನೀಡಿ ಸಹಕರಿಸಿದೆ.ಚಿಕಿತ್ಸೆ ವೆಚ್ಚ, ಔಷಧಿ, ಊಟೋಪಚಾರ ಹಾಗೂ ಮಂಜೇಶ್ವರಕ್ಕೆ ಪ್ರಯಾಣ ವೆಚ್ಚ ಎಲ್ಲಾ ಸೇರಿ ಸುಮಾರು 27,500 ರೂ.ಗಳಾಗಿದ್ದು, ಬ್ಯಾಂಕಿನ ನಿವೃತ್ತ ಮಹಿಳಾಧಿಕಾರಿ 10,000 ರೂ., ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಸದಾನಂದ ಶೆಟ್ಟಿ ಅಂಬಲಪಾಡಿ 10,000 ರೂ., ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಸತೀಶ್ ಶೆಟ್ಟಿ ಅಂಬಲಪಾಡಿ ಅವರು 5,000ರೂ. ನೀಡಿದ್ದು, ಉಳಿದ ಮೊತ್ತವನ್ನು ವಿಶು ಶೆಟ್ಟಿ ಭರಿಸಿದ್ದಾರೆ.

ಪ್ರಸ್ತುತ ಮಹಿಳೆ ತನ್ನ ಕುಟುಂಬವನ್ನು ಸೇರಲು ಹಂಬಲಿಸುತ್ತಿದ್ದು, ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಸುಮಾರು 45 ದಿನಗಳ ಹಿಂದೆ ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸಹಾಯಕಳಾಗಿ ಕೂಗುತ್ತಾ ನಡೆದಾಡುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಅನು ಎಂಬಾಕೆಯನ್ನು ವಿಶು ಶೆಟ್ಟಿ ಅವರು ಪಡುಬಿದ್ರೆ ಪೊಲೀಸ್ ಠಾಣೆಯ ಸತೀಶ್ ಹಾಗೂ ಪ್ರೀತಿ ಅವರ ನೆರವಿನಿಂದ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. ಆರಂಭದಲ್ಲಿ ತೀವ್ರ ಪ್ರತಿರೋಧ ಒಡ್ಡಿದ್ದ ಮಹಿಳೆ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸಿ ಇದೀಗ ಗುಣಮುಖರಾಗಿದ್ದಾರೆ. ತನ್ನನ್ನು ಮನೆ ಸೇರಿಸುವಂತೆ ಅಂಗಲಾಚುತ್ತಿದ್ದಾರೆ.

ಈಕೆ ನೀಡಿದ ವಿಳಾಸ ಹಾಗೂ ಮಾಹಿತಿಯನ್ನು ಆಂಧ್ರ ಪೊಲೀಸರಿಗೆ ನೀಡಿ ವಿಶು ಶೆಟ್ಟಿ ಹಾಗೂ ಬಾಳಿಗಾ ಆಸ್ಪತ್ರೆಯ ವೈದ್ಯರಿಂದ ಈಕೆಯ ಕುಟುಂಬವನ್ನು ಪತ್ತೆ ಹಚ್ಚುವ ಕಾರ್ಯ ನಡೆದರೂ ಫಲಕಾರಿಯಾಗಿಲ್ಲ. ಈ ನಿಟ್ಟಿನಲ್ಲಿ ಆಂಧ್ರ ಪೊಲೀಸರಿಂದ ಸರಿಯಾದ ಸಹಕಾರ ಸಿಕ್ಕಿಲ್ಲ ಅಲ್ಲದೆ ಜಿಲ್ಲಾ ಮಹಿಳಾ ಕಲ್ಯಾಣ ಇಲಾಖೆಯಿಂದ ಸೂಕ್ತ ಸ್ಪಂದನೆಯೇ ದೊರೆತಿಲ್ಲ ಎಂದು ವಿಶು ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಗುಣಮುಖಳಾಗಿರುವ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದಾಗ, ಎಲ್ಲಿ ಆಶ್ರಯ ನೀಡುವುದು ಎಂಬ ಪ್ರಶ್ನೆ ಎದುರಾದಾಗ ವಿಶು ಶೆಟ್ಟಿ ಅವರ ಮನವಿ ಮೇರೆಗೆ ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರು ಸ್ಪಂದಿಸಿ, ಆಶ್ರಯ ನೀಡಲು ಒಪ್ಪಿ ಮಾನವೀಯಯತೆ ಮೆರೆದಿದ್ದಾರೆ. ಮಹಿಳೆಯನ್ನು ಶುಕ್ರವಾರ ವಿಶು ಶೆಟ್ಟಿ ಅವರು ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ.

ಮಹಿಳೆಯರು ಮಾನಸಿಕ ಅಸ್ವಸ್ಥರಾಗಿ ಹೀನಾಯ ಬದುಕು ಸಾಗಿಸುತ್ತಿರುವ ಪ್ರಕರಣಗಳು ವರದಿಯಾದರೂ, ಜಿಲ್ಲಾ ಮಹಿಳಾ ಪರ ಇಲಾಖೆಗಳು ಜಾಣ ಮೌನ ಮೆರೆಯುತ್ತಿವೆ. ಮಹಿಳಾ ದಿನಾಚರಣೆಯಂದು ದೊಡ್ಡ ದೊಡ್ಡ ಹೇಳಿಕೆ ಕೊಡುವ ಅಧಿಕಾರಿಗಳು ಇದೀಗ ತನ್ನ ಕುಟುಂಬವನ್ನು ಸೇರಲು ದಿನನಿತ್ಯ ಹಂಬಲಿಸುವ ಮಹಿಳೆಗೆ ನ್ಯಾಯ ಕೊಡಲು ಮುಂದಾಗದಿರುವುದು ವಿಶಾದನೀಯ.

~ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು, ಉಡುಪಿ*

             

 
 
 
 
 
 
 
 
 
 
 

Leave a Reply