ಸಂಸದೆ ಶೋಭಾ ಕರಂದ್ಲಾಜೆಯಿಂದ ಕೋವಿಡ್ ಹಾಗೂ ತೌಖ್ತೇ ಚಂಡಮಾರುತದ ಹಾನಿಯ ಅವಲೋಕನ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಖಾಯಿಲೆಯ ಎರಡನೇ ಅಲೆಗೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಕಳೆದ ಎಂಟು ದಿನಗಳಲ್ಲಿ ಇದೀಗ ಎರಡನೇ ಬಾರಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋವಿಡ್ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.

ಕೋವಿಡ್-19 ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ನಾಗರೀಕರಿಗೆ ಬೆಡ್ ಹಂಚಿಕೆ, ಆಕ್ಸಿಜನ್ ಪೂರೈಕೆ, ರೆಮಿಡಿಸಿವರ್ ಸರಬರಾಜು, ವ್ಯಾಕ್ಸೀನ್ ನೀಡುವಿಕೆಯೇ ಮೊದಲಾದ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ಪಡೆದುಕೊಂಡ ಸಂಸದೆ ಶೋಭಾ ಕರಂದ್ಲಾಜೆ, ಆಸ್ಪತ್ರೆಗಳಿಗೆ ದಾಖಲಾಗುವ ಜಿಲ್ಲೆಯ ಯಾವುದೇ ಕೋವಿಡ್ ಸೋಂಕಿತರಿಗೆ ಯಾವುದೇ ಕೊರತೆಯಾಗದಂತೆ ಹೇಗೆ ಸನ್ನದ್ಧರಾಗಿರಬೇಕೆಂಬ ಕುರಿತು ಜಿಲ್ಲಾಡಳಿತದ ಕೋವಿಡ್ ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಉಲ್ಲೇಖಿಸಿದ ಸಂಸದೆಯವರು ಗ್ರಾ.ಪಂ. ಮಟ್ಟದ ಕೋವಿಡ್ ಕಾರ್ಯಪಡೆಯು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಲು ಸೂಚಿಸಿದರು.

ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯಿಂದ ವಿವರವಾಗಿ ವರದಿ ಪಡೆದ ಶೋಭಾರವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಸಭೆ ನಡೆಯುತ್ತಿದ್ದಾಗಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ, ಉಡುಪಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವರ್, ಇತರ ಅಗತ್ಯದ ಔಷಧಿಗಳು, ಆಸ್ಪತ್ರೆ ಸಲಕರಣೆಗಳೇ ಮೊದಲಾದುವುಗಳ ಪೂರೈಕೆ ಬಗ್ಗೆ ಚರ್ಚಿಸಿ, ಶೀಘ್ರ ಪೂರೈಕೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ಒಟ್ಟಾರೆಯಾಗಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕೋವಿಡ್ ನ ಎರಡನೇ ಅಲೆ ಹಿಮ್ಮೆಟ್ಟುತ್ತಿರುವ ಲಕ್ಷಣಗಳು ಗೋಚರಿಸುತ್ತಿರುವುದನ್ನು ತಿಳಿಸಿದರಲ್ಲದೆ ಉಡುಪಿ ಜಿಲ್ಲೆಯ ಜನತೆ ಅದರಲ್ಲೂ ಮುಖ್ಯವಾಗಿ ಸೋಂಕಿತರು ಮತ್ತವರ ಕುಟುಂಬಗಳ ಸದಸ್ಯರು ಯಾವುದೇ ರೀತಿಯ ಒತ್ತಡ, ಆತಂಕಕ್ಕೊಳಗಾಗದಂತೆ ವಿನಂತಿಸಿದರು.

ತೌಖ್ತೇ ಚಂಡಮಾರುತದ ಪರಿಣಾಮಗಳನ್ನೆದುರಿಸಲು ಜಿಲ್ಲೆಯ ಉಡುಪಿ, ಮಲ್ಪೆ, ಕಾಪು, ಪಡುಬಿದ್ರಿ, ಬೇಂಗ್ರೆ, ಕುಂದಾಪುರ, ಬೈಂದೂರು ಮೊದಲಾದ ಪ್ರದೇಶಗಳ ಕರಾವಳಿ ಭಾಗಗಳಲ್ಲಿ ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅವಲೋಕಿಸಿದರು. ಅಗತ್ಯವಿರುವೆಡೆಗಳಲ್ಲಿ ತೀರ ಪ್ರದೇಶಗಳ ನಿವಾಸಿಗಳನ್ನು ಸಾಕಷ್ಟು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಂಸದೆ ಸೂಚಿಸಿದರು.

ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್,ಜಿ.ಪಂ. ಸಿಇಓ ಡಾ. ವೈ ನವೀನ್ ಭಟ್, ಜಿ.ಪಂ. ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್ ಮೊದಲಾದವರು ಹಾಜರಿದ್ದರು.ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಉಪವಿಭಾಗಾಧಿಕಾರಿ ರಾಜು ,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಡಿ.ಹೆಚ್.ಓ. ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಲಸಿಕೆ ಕಾರ್ಯದ ಅಧಿಕಾರಿ ಡಾ.ರಾಮ ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

 
 
 
 
 
 
 
 
 
 
 

Leave a Reply