ಉಡುಪಿ : ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪ

ಉಡುಪಿ : ಪಕ್ಷದ ಬೆಳವಣಿಗೆಯ ಹಾದಿಯಲ್ಲಿ ಅನುಶಾಸನ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜೊತೆಗೆ ಆಡಳಿತದಲ್ಲಿ ಸುಧಾರಣೆ, ಜವಾಬ್ದಾರಿಯಲ್ಲಿ ಹೊಸತನ, ಸಕ್ರಿಯತೆಯಲ್ಲಿ ಅನ್ಯೋನ್ಯತೆಯನ್ನು ಅಳವಡಿಸಿಕೊಂಡಾಗ ಕಾರ್ಯಕರ್ತರು ಮತ್ತು ಪಕ್ಷ ಇನ್ನಷ್ಟು ಸದೃಢವಾಗಿ ಬೆಳೆಯಲು ಸಾಧ್ಯ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದರು.

ಇಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅಂದು ಡಾ. ಶ್ಯಾಮಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯರವರು ಯಾವ ಕಲ್ಪನೆಯ ಕನಸುಗಳನ್ನು ಹಾಗೂ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಪಕ್ಷವನ್ನು ಆರಂಭ ಮಾಡಿದ್ದಾರೋ ಆ ವಿಚಾರಧಾರೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಪಕ್ಷದ ಚಟುವಟಿಕೆಗಳನ್ನು ಅಂದಿನಿಂದ ಇಂದಿನವರೆಗೆ ನಿರ್ವಹಿಸಿಕೊಂಡು ಬಂದಿದ್ದೇವೆ. ನಮ್ಮ ಪಕ್ಷ ಹೋರಾಟಗಳ ಮುಖಾಂತರ ಆರಂಭವಾಗಿದೆ.

ಕಾಶ್ಮೀರದ ಹೋರಾಟವನ್ನು ಕಣ್ಣ ಮುಂದೆ ಇಟ್ಟುಕೊಂಡು ಡಾ. ಶ್ಯಾಮಪ್ರಸಾದ್ ಮುಖರ್ಜಿ ಯಾವ ಹೋರಾಟವನ್ನು ಆರಂಭ ಮಾಡಿದ್ದಾರೋ ಅದೇ ರೀತಿಯ ಹೋರಾಟಗಳನ್ನು ರಾಷ್ಟ್ರೀಯ, ತಾಲೂಕು, ಗ್ರಾಮ ಮಟ್ಟದಲ್ಲಿ ಮಾಡಿಕೊಂಡು ಎಲ್ಲರೂ ಬೆಳೆದಂತವರು. ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಎಲ್ಲಾ ಪ್ರಯತ್ನಗಳನ್ನು ಎಲ್ಲಾ ಹಂತಗಳಲ್ಲಿ ಮಾಡುತ್ತಾ ಬಂದಿದ್ದೇವೆ.

ಉಡುಪಿ ಜಿಲ್ಲೆ ಆಡಳಿತದಲ್ಲಿ ಹೊಸತನವನ್ನು ತರುವ ನಿಟ್ಟಿನಲ್ಲಿ ಪಕ್ಷದ ಹಿರಿಯರು ಅಂದು ಹಾಕಿಕೊಟ್ಟ ಮಾರ್ಗ ಎಂದಿಗೂ ಪ್ರಸ್ತುತ ಡಾ. ವಿ.ಎಸ್. ಆಚಾರ್ಯರವರು ಉಡುಪಿ ನಗರ ಸಭೆಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ದೇಶದಲ್ಲೇ ಮೊದಲ ಬಾರಿಗೆ ತಲೆಯಲ್ಲಿ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಿರುವುದು ಇತಿಹಾಸ.

ಈ ದೆಸೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ವಿನೂತನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಉಡುಪಿ ತಾಲೂಕಿನಲ್ಲಿ ಪ್ರಾರಂಭಗೊಂಡು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಯೋಜನೆ, ಕಾರ್ಕಳದಲ್ಲಿ ಮಾಡುತ್ತಿರುವ ಕಾರ್ಲ ಕಜೆ ಮತ್ತು ವಾತ್ಸಲ್ಯ ಬಿಳಿ ಬೆಂಡೆ ಯೋಜನೆಗಳು ದೇಶದಲ್ಲೇ ಮಾದರಿಯಾಗಿವೆ.

ಪಕ್ಷದ ಕಾರ್ಯಕ್ರಮಗಳು, ಅಭಿಯಾನಗಳು ಸಮಾಜದಲ್ಲಿ ಪರಿವರ್ತನೆ ತರುವ ಮೂಲಕ ಕಾರ್ಯಕರ್ತರನ್ನು ಬೆಳೆಸುವ ಮತ್ತು ವ್ಯಕ್ತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಿಣಾಮ ಬೀರುವಂತಾಗಬೇಕು. ಪಕ್ಷದ ಎಲ್ಲಾ ಸ್ತರದ ಚಟುವಟಿಕೆಗಳಲ್ಲಿ ಹೊಸತನವನ್ನು ಅಳವಡಿಸಿಕೊಂಡಾಗ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಸುನೀಲ್ ಕುಮಾರ್ ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಪೇಕ್ಷಿತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಮಡಿವಾಳ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷೆ ಸವಿತಾ ಎಸ್. ಕೋಟ್ಯಾನ್ ವಂದಿಸಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply