ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರ ಬಂಧನ

ಪಾಂಗಾಳದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಉಡುಪಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸುರತ್ಕಲ್ ಮೂಲದ ಲಿಖಿತ್ (23), ದಿನೇಶ್(21), ಆಕಾಶ್ ಮತ್ತು ಕಾರ್ತಿಕ್ ಬಂಧಿತರು.

ಪಡುಬಿದ್ರೆ, ಉಡುಪಿಯಲ್ಲಿ ಜಾಗದ ವಹಿವಾಟು ನಡೆಸುತ್ತಿದ್ದ ಶರತ್ ಶೆಟ್ಟಿ ಮತ್ತು ಯೋಗೀಶ್ ಆಚಾರ್ಯ ಎಂಬವರು ಹಿಂದೆ ಸ್ನೇಹಿತರಾಗಿದ್ದರು. ಎರಡು ವರ್ಷಗಳ ಹಿಂದೆ ಇವರ ನಡುವೆ ಕಲಹ ಏರ್ಪಟ್ಟಿದ್ದು, ಆನಂತರ ಕತ್ತಿ ಮಸೆಯುತ್ತಿದ್ದರು. ಇದೇ ವೇಳೆ, ಭೂಗತ ಪಾತಕಿ ಕಲಿ ಯೋಗೀಶ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯೋಗೀಶ್ ಆಚಾರ್ಯನಿಗೆ ಸಹಕಾರ ನೀಡುತ್ತಿದ್ದ. ವಹಿವಾಟಿನಲ್ಲಿ ಅಡ್ಡ ಆಗಿದ್ದ ಶರತ್ ಶೆಟ್ಟಿಯನ್ನು ವಿರೋಧಿ ತಂಡ ಕೊಲ್ಲಲು ಸಂಚು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದಕ್ಕಾಗಿ ಭೂಗತ ಪಾತಕಿ ಕಲಿ ಯೋಗೀಶನೇ ಕೆಲಸ ಮಾಡಿಸಿದ್ದಾನೆ ಎನ್ನಲಾಗುತ್ತಿದ್ದು, ಆತನೇ ಹಲವು ಬಾರಿ ಫೋನ್ ಮಾಡಿ ಶರತ್ ಶೆಟ್ಟಿಗೆ ಬೆದರಿಕೆ ಒಡ್ಡಿದ್ದ. ಶರತ್ ಶೆಟ್ಟಿಗೆ ಇಂಟರ್ನೆಟ್ ಕರೆಗಳು ಬಂದಿರುವ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ವಾರದ ಹಿಂದೆಯೇ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು ಅನ್ನುವ ಮಾಹಿತಿ ತಿಳಿದುಬಂದಿತ್ತು. ಆನಂತರ, ಇನ್ನಿಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಇದೀಗ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಬಂಧನದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಯಾರು ಪ್ರಮುಖ ಸಂಚುಕೋರರು ಅನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಪೊಲೀಸ್ ಮೂಲಗಳ ಪ್ರಕಾರ, ಕಲಿ ಯೋಗೀಶನದ್ದೇ ಕೃತ್ಯ ಅನ್ನುವ ಮಾಹಿತಿ ಲಭಿಸಿದೆ. ಆದರೆ ಹಂತಕರು ಕಲಿ ಯೋಗೀಶನ ಅಣತಿಯಂತೆ ಕೃತ್ಯ ಎಸಗಿದ್ದಾರೆಯೇ ಅನ್ನೋದನ್ನು ಪೊಲೀಸರು ದೃಢಪಡಿಸಿಲ್ಲ.

ಫೆ.5ರಂದು ಸಂಜೆಯ ವೇಳೆಗೆ ಪಾಂಗಾಳ ಸೇತುವೆ ಬಳಿ ಶರತ್ ಶೆಟ್ಟಿಯನ್ನು ನಾಲ್ವರು ಮಾತನಾಡುವ ನೆಪದಲ್ಲಿ ಕತ್ತಿ ಬೀಸಿ ಕೊಲೆ ಮಾಡಿದ್ದರು. ಸ್ಥಳದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಫೋನ್ ಕರೆ, ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಕೃತ್ಯದ ಬಳಿಕ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಪಡುಬಿದ್ರೆ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಹಂತಕರ ಬೆನ್ನು ಹತ್ತಿದ್ದರು. ಪ್ರಮುಖ ಆರೋಪಿಯ ಬಂಧನದ ಬಳಿಕ ಯಾರೆಲ್ಲ ಫೈನಾನ್ಸ್ ಮಾಡಿದ್ದಾರೆ ಅನ್ನುವುದು ತಿಳಿದುಬರಲಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.

ಹುಡುಗಿ ವಿಚಾರದಲ್ಲಿ ಒಂದು ತಂಡ ಶರತ್ ಶೆಟ್ಟಿ ಕೊಲ್ಲಲು ಸಂಚು ನಡೆಸಿತ್ತು ಎನ್ನಲಾಗಿತ್ತು. ಅದೇ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕುಳಗಳು ಕೊಲೆಗೆ ಕೈಜೋಡಿಸಿದ್ದವು ಅನ್ನುವ ಮಾಹಿತಿಗಳಿವೆ. ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

 
 
 
 
 
 
 
 
 
 
 

Leave a Reply