ಕಂಬಳ ಪ್ರೇಮಿಗಳಿಗೆ ಗುಡ್ ನ್ಯೂಸ್ : ಕಂಬಳಕ್ಕೆ ಕೋಟಿ ಅನುದಾನ

ಬೆಂಗಳೂರು: ಕಂಬಳ ಪ್ರೇಮಿಯರಿಗೊಂದು ನೂತನ ಸಿಹಿ ಸುದ್ದಿ ಸಿಕ್ಕಿದ್ದು, ಕರಾವಳಿಯಲ್ಲಿ ನಡೆಯುವ ಪ್ರತಿ ಕಂಬಳಕ್ಕೆ ತಲಾ 5 ಲಕ್ಷ ರೂ. ನಂತೆ ಅನುದಾನ ಒದಗಿಸಲು ಸರಕಾರ ಒಪ್ಪಿದೆ.ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ರಾಜಶೇಖರ್ ಆದೇಶ ಹೊರಡಿಸಿದ್ದಾರೆ. 

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರಕಾರದ ವತಿಯಿಂದ ಅನುದಾನ ಒದಗಿಸಬೇಕು ಎಂಬುದು ಬಹು ಕಾಲದ ಬೇಡಿಕೆ. ಎರಡು ವಾರಗಳ ಹಿಂದೆ ಮಿಯಾರುವಿನಲ್ಲಿ ನಡೆದ ಕಂಬಳಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಆಗಮಿಸಿದ್ದರು. ಈ ವೇಳೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಂಬಳಕ್ಕೆ ಸರಕಾರದಿಂದ ಅನುದಾನ ಒದಗಿಸಲು ವಿನಂತಿಸಿದ್ದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪ್ರತಿ ಕಂಬಳದ ಮಾಹಿತಿಯನ್ನು ಸಂಗ್ರಹಿಸಿ, ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಕಂಬಳವನ್ನು ಪ್ರೋತ್ಸಾಹಿಸಲು ಸರಕಾರ ಈ ನಿರ್ಧಾರ ಕೈಗೊಂಡಿದೆ.

ಕಂಬಳ ಸಂಬಂಧ 1 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ಕಂಬಳಕ್ಕೆ ತಲಾ 5 ಲಕ್ಷ ರೂ. ಹಾಗೂ ಉಡುಪಿ ಜಿಲ್ಲೆಯ 10 ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ದೊರೆಯಲಿದೆ.

 
 
 
 
 
 
 
 
 
 
 

Leave a Reply