ಪುಣ್ಯಭೂಮಿ ಉಡುಪಿ ರಾಜ್ಯದ ಹೆಗ್ಗುರುತು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಉಡುಪಿ: ಕರ್ನಾಟಕದ ಸಮುದ್ರದ ತೀರದಲ್ಲಿರುವ ಉಡುಪಿ ಜಿಲ್ಲೆ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕಲಾಸಂಸ್ಕೃತಿಯ ಸಮೃದ್ಧಿಗಾಗಿ ಪ್ರಸಿದ್ಧವಾಗಿದ್ದು ಕರಾವಳಿಯಲ್ಲಿ ಪ್ರವಾಸೋದ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಭೌಗೋಳಿಕವಾಗಿ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆಗೆ 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಗೆ ಇದು ನನ್ನ ಎರಡನೇ ಭೇಟಿಯಾಗಿದೆ. ಇಲ್ಲಿಗೆ ನಾನು ಪದೇ ಪದೇ ಭೇಟಿ ನೀಡಲು ಇಚ್ಛಿಸುತ್ತೇನೆ. ಏಕೆಂದರೆ ಇದು ದೇವ-ದೇವತೆಗಳ ನಾಡು. ಅಸ್ತಿತ್ವಕ್ಕೆ ಬಂದು 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ಅತ್ಯಂತ ವೇಗದ ಅಭಿವೃದ್ಧಿಯನ್ನು ಸಾಧಿಸಿದೆ. ಇಲ್ಲಿನ ಮೂಲಸೌಕರ್ಯಗಳು ವೇಗವಾಗಿ ಬೆಳೆದಿದೆ. ಇದಕ್ಕೆ ಇಲ್ಲಿಗೆ ಬಂದ ಎಲ್ಲಾ ಪ್ರಾಮಾಣಿಕ ಅಧಿಕಾರಿಗಳ, ಜನಪ್ರತಿನಿಧಿ ಗಳ ಕೊಡುಗೆ ಇದೆ. ಎಲ್ಲರ ಸಹಕಾರದಿಂದ ಜಿಲ್ಲೆ ಅತ್ಯಂತ ವೇಗದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದವರು ಹೇಳಿದರು.

ಮಲ್ಪೆಯಲ್ಲಿರುವ ಸರ್ವಋತು ಮೀನುಗಾರಿಕಾ ಬಂದರು ಪ್ರದೇಶಕ್ಕೆ ನಾನಿಂದು ಭೇಟಿ ನೀಡಿದ್ದೇನೆ. ಸುಮಾರು ಎರಡು ಲಕ್ಷ ಮೀನುಗಾರರಿಗೆ ಇದು ಉದ್ಯೋಗವನ್ನು ನೀಡಿದೆ. ಮಲ್ಪೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದ ರಾಜ್ಯಪಾಲರು ಇದಕ್ಕೆ ಯಾವುದೇ ಸಹಕಾರ ಅಪೇಕ್ಷಿಸಿದರೆ ನಿಮ್ಮೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಿರುವುದು. ದೇಶದ ಯಾವುದೇ ರಾಜ್ಯ ಹಾಗೂ ಜಿಲ್ಲೆಗಿಂತ ಅಧಿಕವಾಗಿರುವ ಈ ಪರಂಪರೆ ಮುಂದುವರಿದುಕೊಂಡು ಹೋಗಲು ಜಿಲ್ಲೆಯ ಎಲ್ಲಾ ಜಾಗೃತ ಜನತೆ ಸಹಕರಿಸಬೇಕು ಎಂದರು.

ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯ ಮೂಲಕ ಅನೇಕ ಯೋಜನೆಗಳು ಉಡುಪಿ ಜಿಲ್ಲೆಗೆ ಬರಲು ಸಿದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆ ಇನ್ನಷ್ಟು ವೇಗದ ಪ್ರಗತಿ ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರುಮುಂದಿನ ದಿನಗಳಲ್ಲಿ ಜನರ ಕೆಲಸ ಸಾಧ್ಯವಾದಷ್ಟು ವೇಗದಲ್ಲಿ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಶೀಘ್ರದಲ್ಲೇ 2-3 ಉಪ ವಿಭಾಗಗಳೊಂದಿಗೆ, ಎಸಿಎಫ್ ಕಚೇರಿ ಹಾಗೂ ಇನ್ನೊಂದು ಆರ್‌ಟಿಓ ಕಚೇರಿ ತೆರೆಯಲು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ 1997ಲ್ಲಿ ಶಾಸಕರಾಗಿದ್ದ ರಾಜ್ಯದ ಮಾಜಿ ಮುಖಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

25 ವರ್ಷಗಳ ಹಿಂದೆ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ಪ್ರಥಮ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಗೋಪಾಲನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಜಿಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಇವರೊಂದಿಗೆ ದಾನಿಗಳಾದ ಮಾಹೆ ವಿವಿ ಕುಲಪತಿ ಲೆ.ಜ.(ಡಾ.) ವೆಂಕಟೇಶ್, ಉದ್ಯಮಿ ಜಿ.ಶಂಕರ್, ನಿಟ್ಟೆ ವಿವಿಯ ಎನ್.ವಿಶಾಲ್ ಹೆಗ್ಡೆ ಅವರನ್ನು ರಜತೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್.ಕಲ್ಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಅತಿಥಿಗಳನ್ನು ಸ್ವಾಗತಿಸಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ವಂದಿಸಿದರು. ಶಂಕರ್‌ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply