ಮಳೆನೀರು ತುಂಬಿದ್ದ ಹೊಂಡದಲ್ಲಿ ಮುಳುಗಿ ಸ್ನಾನ ಮಾಡಲು ಇಳಿದ ಆರು ಮಕ್ಕಳು ಸಾವು

ಹರಿಯಾಣದ ಗುರ್ಗಾಂವ್‌ನ ಬಜ್‌ಘೇರಾ ಪ್ರದೇಶದ ಸೆಕ್ಟರ್ 111 ರಲ್ಲಿ ಮಳೆನೀರು ತುಂಬಿದ್ದ ಹೊಂಡದಲ್ಲಿ ಸ್ನಾನ ಮಾಡಲು ಇಳಿದಿದ್ದ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ನಂತರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ದೇವಾ (11), ದುರ್ಗೇಶ್, ಅಜಿತ್, ರಾಹುಲ್, ಪಿಯೂಷ್ ಮತ್ತು ವರುಣ್ ಎಂದು ಪೊಲೀಸರು ಗುರುತಿಸಿದ್ದಾರೆ. ದುರ್ಗೇಶ್ ಮತ್ತು ಅಜಿತ್ ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶಂಕರ್ ವಿಹಾರ್ ಕಾಲೋನಿಯ ನಿವಾಸಿಗಳೆಲ್ಲರೂ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಂಡದಲ್ಲಿ ಸ್ನಾನ ಮಾಡಲು ಹೋಗಿದ್ದರು. ”ಆರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಾಗಿತ್ತು. ಆರು ಮೃತದೇಹಗಳು ಪತ್ತೆಯಾಗಿವೆ. ಎಲ್ಲರೂ 8 ರಿಂದ 13 ವರ್ಷದೊಳಗಿನವರು. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಹೆಚ್ಚಿನ ಮಕ್ಕಳು ಕಾಣೆಯಾಗಿದ್ದಾರೆಯೇ ಎಂದು ಪರಿಶೀಲಿಸಲು ನಾವು ಸ್ಥಳೀಯ ಪ್ರದೇಶದಲ್ಲಿ ಪ್ರಕಟಣೆಗಳನ್ನು ನೀಡಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಮತ್ತು ಆಳ ನೀರಿನ ಡೈವರ್‌ಗಳು ಇಲ್ಲಿ ಬೀಡುಬಿಟ್ಟಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವೂ ಸಹ ದಾರಿಯಲ್ಲಿದೆ. ಅಗತ್ಯವಿದ್ದರೆ, ಮತ್ತೆ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಮತ್ತು ಹೊಂಡಗಳಿಂದ ನೀರನ್ನು ಹೊರಹಾಕಲಾಗುವುದು ಎಂದು ಗುಡಗಾಂವ್ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ ಸುಮಾರು 5-7 ಎಕರೆ ಪ್ರದೇಶದಲ್ಲಿ ಹಲವು ಹೊಂಡಗಳಿರುವ ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಮಕ್ಕಳು ಸ್ನಾನ ಮಾಡಲು ತೆರಳಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. “ತನಿಖೆ ನಡೆಸಲಾಗುವುದು ಮತ್ತು ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೊಂದು ದುರಂತ ಘಟನೆ. ಭವಿಷ್ಯದಲ್ಲಿ ಇಂತಹ ತಾತ್ಕಾಲಿಕ ಕೆರೆಗಳನ್ನು ಗುರುತಿಸಿ ಮುಚ್ಚಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಡಿಸಿ ಹೇಳಿದರು.

 
 
 
 
 
 
 
 
 
 
 

Leave a Reply