ಪುಷ್ಪಲೋಕದ ಅಚ್ಚರಿ ಈ ನಡುರಾತ್ರಿಯ ನಿಶಾಗಂಧಿ..

ವಾರ್ಷಿಕವಾಗಿ ಅಥವಾ ಎರಡು ವರ್ಷದಲ್ಲಿ ಒಮ್ಮೆ ನಡು ರಾತ್ರಿಯಲ್ಲಿ ಅರಳುವ ಬ್ರಹ್ಮಕಮಲ ಪುಷ್ಪಲೋಕದ ಅಚ್ಚರಿಯೇ ಸರಿ. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ. ಹಿಂದಿಯಲ್ಲಿ ನಿಶಾಗಂಧಿ, ಅಮೇರಿಕಾದಲ್ಲಿ ಮಿಡ್‍ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಈ ಹೂವಿನ ತವರು ದಕ್ಷಿಣ ಅಮೆರಿಕಾವಾಗಿದ್ದು, ಅಲ್ಲಿಂದ ಸ್ಪಾಪಿನಷ್‍ರು, ಪೋರ್ಚ್‍ಗೀಸ್ ನಾವಿಕರ ಮೂಲಕ ವಿಶ್ವದ ಇತರ ಕಡೆಗೆ ಹರಡಿತೆಂದು ಹೇಳಲಾಗಿದೆ. ಬ್ರಹ್ಮಕಮಲ ಭಾರತದತ್ತ ಹದಿನೇಳನೇ ಶತಮಾನದಲ್ಲಿ ಬಂದಿರಬಹುದು.

ಇತರೆ ಪುಷ್ಪಗಿಡಗಳಿಗೆ ವಿಭಿನ್ನವಾಗಿರುವ ಇದು ಸುಮಾರು ಹತ್ತರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಸಸ್ಯದಲ್ಲಿ ರೆಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳವಾಗಿದೆ.
ಚಪ್ಪಟೆಯಾಗಿರುವ ಕಾಂಡ, ರೆಂಬೆಗಳು ಹಚ್ಚಹಸಿರಿನಿಂದ ಕೂಡಿದ್ದು, ಇವುಗಳೇ ಧ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುತ್ತವೆ.ತುದಿಭಾಗ ನೀಳವಾಗಿ ಹಾಗೂ ಅಗಲವಾಗಿ ಹರಡಿಕೊಂಡಿರುವ ಎಲೆಯೇ ಕಾಂಡವಾಗಿದ್ದು, ಇದನ್ನು ಪರ್ಣಸ್ಥಂಭ ರಚನೆ ಎಂದು ಹೇಳುತ್ತಾರೆ.ಇದರ ಸಸ್ಯಾಭಿವೃದ್ಧಿ ಅಷ್ಟೇನು ಕಷ್ಟವಲ್ಲ. ಬಲಿತ ಎಲೆಯನ್ನೇ ನೆಟ್ಟರೆ ಸಾಕು ಚಿಗುರು ಮೂಡಿ ಸಸ್ಯ ಬೆಳೆಯುತ್ತದೆ.

ಹೆಚ್ಚಿನ ನೀರು, ಗೊಬ್ಬರವನ್ನೂ ಇದು ಅಪೇಕ್ಷಿಸುವುದಿಲ್ಲ. ಹೀಗಾಗಿ ಇದನ್ನು ಮನೆಯ ಅಂಗಳದಲ್ಲಿ ಅಥವಾ ಹೂಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಮನೆಯ ಒಳಗೆ ಕುಂಡದಲ್ಲಿ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.

ಹೀಗೆ ಗಿಡ ನೆಟ್ಟಿದ್ದ ಬೆಂಗಳೂರು ನಿವಾಸಿಯಾದ ಗೋಪಾಲ ಐತಾಳರ ಹೂತೋಟದಲ್ಲಿ ನಿನ್ನೆ ತಡ ರಾತ್ರಿ 50ಕ್ಕೂ ಹೆಚ್ಚು ಬ್ರಹ್ಮ ಕಮಲ ಹೂ ಅರಳಿದೆ.

 
 
 
 
 
 
 
 
 
 
 

Leave a Reply