ಯಕ್ಷಲಹರಿ, ಕಿನ್ನಿಗೋಳಿಯ ಅಧ್ಯಕ್ಷ​ ​ಸತೀಶ್ ರಾವ್ ನಿಧನ 

ಯಕ್ಷಗಾನ ತಾಳಮದ್ದಳೆ ವಲಯದಲ್ಲಿ ಪ್ರತಿಷ್ಠಿತ ಎನಿಸಿರುವ ಕಿನ್ನಿಗೊಳಿಯ​ ಯಕ್ಷಲಹರಿ ಯ ಅಧ್ಯಕ್ಷ ಸತೀಶ್ ರಾವ್ ( 57 ವರ್ಷ ) ಅಲ್ಪಕಾಲದ ಅಸೌಖ್ಯದಿಂದಾಗಿ  ಇಂದು ಬೆಳಿಗ್ಗೆ ನಿಧನರಾದರು .ಪತ್ನಿ , ಮೂವರು ಗಂಡು​ ​ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿ​ದ್ದಾರೆ .   ಯಕ್ಷಲಹರಿ ಯ ಅಧ್ಯಕ್ಷರಾಗಿ ಹಲವಾರು ವಿನೂತನ ಕಾರ್ಯಕ್ರಮದ ರೂವಾರಿಯಾಗಿದ್ದರು . ಯಕ್ಷಲಹರಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು . ಕಳೆದ ವರ್ಷ ಯಕ್ಷಲಹರಿಯ ತಾಳಮದ್ದಳೆ ತಂಡವನ್ನು ಮುಂಬೈಗೆ ಕರೆದೊಯ್ದು ಮುಂಬೈನಲ್ಲಿ ಹಲವಾರು ಪ್ರದರ್ಶನ ನೀಡಿ ಅಲ್ಲಿಯ ಪ್ರೇಕ್ಷಕರ ಮೆಚ್ಚುಗೆ ಗಳಿಸಲು ಕಾರಣರಾಗಿದ್ದರು .
ಹವ್ಯಾಸೀ ಅರ್ಥಧಾರಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ರಾಯರು , ತಮ್ಮ ಯಕ್ಷಲಹರಿಯ ಕಾರ್ಯಕ್ರಮಗಳಲ್ಲಿ ಹವ್ಯಾಸೀ ಕಲಾವಿದರಿಗೂ ಅವಕಾಶ ನೀಡುತ್ತಿದ್ದರು. ಕಳೆದ 29  ವರ್ಷಗಳಿಂದಲೂ ಯಕ್ಷಲಹರಿ ಯ ವಾರ್ಷಿಕೋತ್ಸವವು ಅದ್ದೂರಿಯಾಗಿ ತಾಳಮದ್ದಳೆ ಸಪ್ತಾಹದ ಮೂಲಕ ಜರುಗುತ್ತಿತ್ತು . ಆದರೆ , ಈ ವರ್ಷ ಕೊರೋನಾದ ಪರಿಣಾಮದಿಂದಾಗಿ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗದಿದ್ದರೂ , ಇತ್ತೀಚೆಗೆ  ಏಳು ದಿನಗಳ ಕಾಲ ತಮ್ಮದೇ ತಂಡದ ಮೂಲಕ ಬೇರೆ ಬೇರೆ ಊರುಗಳ  ಕೆಲವೊಂದು  ನಿರ್ದಿಷ್ಟ ಮನೆಗಳಲ್ಲಿ ಮನೆ ಮನೆ ತಾಳಮದ್ದಳೆ ಎಂಬ ವಿನೂತನ  ಕಾರ್ಯಕ್ರಮ ನೀಡಿದ್ದರು . ಕಿನ್ನಿಗೋಳಿಯಲ್ಲಿ ತಮ್ಮ   ಸ್ವಾತಿ ಸ್ವೀಟ್ಸ್ ಸಂಸ್ಥೆಯ ಮೂಲಕ ಪ್ರಸಿದ್ಧಿ ಗಳಿಸಿ  ಸ್ವಾತಿ ಭಟ್ರು ಎಂದೇ ಜನಪ್ರಿಯರಾಗಿದ್ದರು.
ಯಕ್ಷಲಹರಿಯ ಕಾರ್ಯ ಕ್ರಮಗಳಿಗೆ ಯಕ್ಷಗಾನ ಅಭಿಮಾನಿಗಳ ಮನೆಗೇ ತೆರಳಿ ಆಮಂತ್ರಣ ಪತ್ರಿಕೆ ನೀಡುವ ಪರಿಪಾಟ ಹೊಂದಿದ್ದು , ಜಿಲ್ಲೆಯ ಎಲ್ಲಾ ಯಕ್ಷಗಾನ ಸಂಘಟನೆಗಳ ನಂಟನ್ನು ಹೊಂದಿದ್ದರು . ಪ್ರತೀ ವರ್ಷವೂ ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದ ರೊಂದಿಗೆ, ಇತ್ತೀಚೆಗೆ ಯಕ್ಷಗಾನ ಸಂಘಟನೆಗಳ ​ಮುಖ್ಯಸ್ಥರು, ಯಕ್ಷಗಾನ ಪೋಷಕರು ಹಾಗೂ ಹವ್ಯಾಸೀ ಹಿರಿಯ ಯಕ್ಷಗಾನ ಕಲಾವಿದರನ್ನೂ ಸಂಮಾನಿಸುವ ಮೂಲಕ ಹೊಸದೊಂದು ಪರಂಪರೆಯ  ತಳಹದಿ ಹಾಕಿದ್ದರು .  ಯಕ್ಷಗಾನ , ಸಂಘಟನೆಗಳ ಕುರಿತಾಗಿ ಅಪೂರ್ವ ಅನುಭವ ಹೊಂದಿದ್ದ ಸತೀಶ್ ರಾವ್ ಪ್ರಸಂಗದ ಆಯ್ಕೆ , ಕಲಾವಿದರ ಆಯ್ಕೆಯ ಕುರಿತಾಗಿ ದೂರದೃಷ್ಟಿ ಹೊಂದಿದ್ದರು .ರಾಯರ  ನಿಧನವು ಯಕ್ಷಗಾನ ರಂಗಕ್ಕೊಂದು ದೊಡ್ಡ ನಷ್ಟ . ದೇವರು , ಧರ್ಮಗಳ ಬಗ್ಗೆ ಅತೀವ  ಶ್ರದ್ಧಾವಂತರಾಗಿದ್ದ ರಾಯರು ಕಟೀಲು ಶ್ರೀ ಭ್ರಮಾರಾಂಬಿಕೆಯ ಅನನ್ಯ ಭಕ್ತರಾಗಿದ್ದರು.

Leave a Reply