ಭ್ರಾತ್ರೃತ್ವವೇ ವಿಶ್ವಶಾಂತಿಗೆ ಭಾರತದ ಮಂತ್ರ.~ ಎ. ಎಸ್. ಎನ್. ಹೆಬ್ಬಾರ್.

ಫೆಬ್ರವರಿ 23 ರೋಟರಿ ಹುಟ್ಟಿದ ದಿನ. ಹಾಗಾಗಿ ಫೆಬ್ರವರಿ ತಿಂಗಳು ವಿಶ್ವ ಶಾಂತಿಯ ಮಾಸ – ರೋಟರಿಯಲ್ಲಿ. ಈ ಕುರಿತು ಪ್ರಸಕ್ತ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿಂತನ ಹರಿಸುವ.

ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಮೇಲಿಂದ ಮೇಲೆ ಭಾರೀ ಭೂಕಂಪಗಳು ಮೊನ್ನೆ, ಮೊನ್ನೆ ಸಂಭವಿಸಿ ಮನೆಗಳು ಧರಾಶಾಯಿಯಾಗಿ ಸಹಸ್ರಾರು ಮಂದಿ ಸತ್ತರು, ಗಾಯಗೊಂಡರು. ಲಕ್ಷಾಂತರ ಜನ ನಿರಾಶ್ರಿತ ರಾದರು. ನೆರವಿಗೆ ಜಾಗತಿಕ ಸಮುದಾಯಕ್ಕೆ ಮೊರೆಯಿಟ್ಟಿತು ಟರ್ಕಿ. ಈ ವಿಪತ್ಕಾಲದಲ್ಲಿ ಟರ್ಕಿ ಎಂಬ ದೇಶದ ನೆರವಿಗೆ ಮೊದಲು ಧಾವಿಸಿದ್ದು ನಮ್ಮ ದೇಶ ಭಾರತ.

 

ಈಗಾಗಲೇ ಪರಿಹಾರ ಸಾಮಗ್ರಿ, ಸ್ವಯಂಸೇವಕರೇ ತುಂಬಿದ ಎರಡು ವಿಮಾನಗಳು ಭಾರತದಿಂದ ಟರ್ಕಿ ರಾಜಧಾನಿ ಅಂಕಾರಾಕ್ಕೆ ಹಾರಿ ಆಗಿವೆ. ಇದೇ ಜಾಗತಿಕ ಶಾಂತಿಗೆ ಭಾರತದ ಕೊಡುಗೆ – ಅದೇ ಭ್ರಾತ್ರೃತ್ವದ ಮಂತ್ರ. ಸಹಸ್ರಾರು ವರ್ಷಗಳಿಂದ “ಸಹನಾವವತು…” ಎಂದೇ ಜಪಿಸಿಕೊಂಡು ಬಂದ ಭಾರತ ಈ ವರೆಗೆ ಯಾವ ದೇಶದ ಮೇಲೂ ತಾನಾಗಿ ಆಕ್ರಮಣ ಮಾಡದೇ ಶಾಂತಿಯ ಅವತಾರವಾಗಿ ಕಂಗೊಳಿಸಿದೆ. ಇತರ ದೇಶಗಳಿಗೆ ಪಾಠ ಹೇಳಿದೆ. “ಲೋಕಾ ಸಮಸ್ತಾ ಸುಖಿನೋ ಭವಂತು” ಎನ್ನುವ ಭಾರತ “ಓಂ ಶಾಂತಿ: ಶಾಂತಿ: ಶಾಂತಿ:” ಎಂದು ಬೋಧಿಸಿದೆ ಜಗತ್ತಿಗೆ. ಆ ಕಾರಣಕ್ಕಾಗಿಯೇ ಭಾರತ ವಿಶ್ವಗುರು ಸ್ಥಾನದಲ್ಲಿದೆ.

 

ಆದರೆ ಈ ಟರ್ಕಿಯಾದರೂ ಎಂಥಾ ದೇಶ? ಪಾಕಿಸ್ತಾನದ ಪರಮ ಮಿತ್ರ. ಹೋದಲ್ಲಿ ಬಂದಲ್ಲಿ ಈ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಪಾಕ್ ಪರ ಬ್ಯಾಟು ಬೀಸುತ್ತಾ, ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಕಟುವಾಗಿ ಟೀಕಿಸುತ್ತಾ ಬಂದವ. ಆತನಿಗೆ ಭಾರತ ಕಂಡರಾಗದು – ಕಾಶ್ಮೀರದ ಸಂಗತಿಯಲ್ಲಿ. ಆದರೆ ಒಂದು ಕಾಲದಲ್ಲಿ ಈ ಟರ್ಕಿ ಸಹಾ ಹಿಂದೂ ಸಂಸ್ಕೃತಿಯನ್ನು ಹೊಂದಿತ್ತು ಎಂಬುದನ್ನರಿಯದ ಮೂರ್ಖರು ಅಲ್ಲಿನ ಆಳರಸರು.

 

ಪ್ರಪಂಚದ ಅತೀ ಪುರಾತನ ಹಿಂದೂ ದೇವಾಲಯ ಇದ್ದದ್ದು ಈ ಟರ್ಕಿಯಲ್ಲಿ. ಜರ್ಮನ್ ಪ್ರಾಚ್ಯ ಸಂಶೋಧಕ ಕ್ಲಾಸ್ ಸ್ಮಿತ್ ಎಂಬವ ಉತ್ಖನನ ನಡೆಸಿ ಟರ್ಕಿಯ ಉರ್ಫಾದಿಂದ ಆರು ಮೈಲು ದೂರದಲ್ಲಿ ತೌರಸ್ ಪರ್ವತಗಳ ತಡಿಯಲ್ಲಿ ಯುಫ್ರೆಟಿಸ್ ನದಿಯ ಉಪನದಿಯಾದ ಕಾಂತಾರದ ಎರಡೂ ದಂಡೆಗಳಲ್ಲಿ ಸಾವಿರಾರು ವರ್ಷಗಳ ಹಿಂದಿನ ಹಿಂದೂ ದೇವಾಲಯಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದ.

 

ಗೊಬೆಕ್ಲಿ ತೇಪೆ ಹೆಸರಿನ ಜಾಗದಲ್ಲಿ ಹರನ್ ಅಂದರೆ ಶಿವನ ದೇವಾಲಯ ಇದ್ದಿತಂತೆ. ಅದನ್ನು ಬ್ರಾಹ್ಮಣರೇ ಕಟ್ಟಿದ್ದಂತೆ! ಭಾರತದಿಂದ 4636 ಕಿ ಮೀ ದೂರದ ಈ ದೇಶ ಹಾಗಾದರೆ ಭಾರತದ ಭಾಗವಾಗಿದ್ದಿರಬೇಕು. ಕಾಂತಾರ ಅಂದರೆ ಕಾಂಧಾರಿ ಅಂದರೆ ಗಾಂಧಾರಿ – ಧ್ರೃತರಾಷ್ಟ್ರನ ರಾಣಿಯಂತೆ. ಶಿಖೆ ಅಂದರೆ ತಲೆಯ ಮೇಲೆ ಜುಟ್ಟು ಇರುವ ಬ್ರಾಹ್ಮಣನ ಪ್ರತಿಮೆ ಸಹಾ ಇಲ್ಲಿ ಉತ್ಖನನದ ವೇಳೆ ದೊರೆತಿದೆ. ಎಂಥಾ ಹತ್ತಿರದ ಸಂಬಂಧ ಟರ್ಕಿ ಮತ್ತು ಭಾರತದ್ದು!

 

ಆದರೆ ಜಿಹಾದ್ ಹೆಸರಲ್ಲಿ ಭಾರತದ ಮೇಲೆ ಕ್ರಿ. ಶ. 1000 ದಿಂದ 1027 ರ ನಡುವೆ ದಂಡೆತ್ತಿಕೊಂಡು ಬಂದ ಮೊತ್ತ ಮೊದಲ ದಾಳಿಕೋರನೇ ಟರ್ಕಿಯ ಗಾಮಿನಿ ಘಜ್ನಾವಿದ್ ವಂಶದ, ಅಫ್ಘಾನಿಸ್ತಾನ ಆಳುತ್ತಿದ್ದ ಘಜನಿ ಮಹ್ಮದ್! ಒಂದಲ್ಲ ಎರಡಲ್ಲ 17 ಸಲ ದಾಳಿ ಮಾಡಿ ಭಾರತದ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋದವನಾತ. ಆ ನಂತರವೂ ಘೋರಿ ಮಹ್ಮದ್ ಸಹಿತ ಹಲವಾರು ದಾಳಿಕೋರರು ಭಾರತದ ಸಂಪತ್ತನ್ನು ಮುಕ್ಕಿ ತಿಂದವರೇ ಮಾತ್ರವಲ್ಲ, ನಮ್ಮ ಸಂಸ್ಕ್ರತಿಯನ್ನು ಸರ್ವನಾಶಮಾಡಲು ಇನ್ನಿಲ್ಲದ ದೌರ್ಜನ್ಯ ನಡೆಸಿದವರೇ. ಆದರೂ ಭಾರತ ಶಾಂತಿಮಂತ್ರ ಬಿಟ್ಟಿರಲಿಲ್ಲ.

 

ಇದೀಗ, ಶತಮಾನಗಳ ನಂತರವೂ ಭಾರತ ತನ್ನ ಶಾಂತಿಯ ಸ್ಥಿರ ಧೋರಣೆ ತ್ಯಜಿಸಲೂ ಇಲ್ಲ. ಸಂಘರ್ಷಕ್ಕಿಂತ ಸಂಧಾನವೇ ಶಾಂತಿ ಸ್ಥಾಪನೆ ಮಾಡಬಲ್ಲುದು ಎಂಬ ನೀತಿಗೆ ಬದ್ಧವಾದ ಈ ಮಹಾನ್ ದೇಶ ವಿಶ್ವಕ್ಕೇ ಶಾಂತಿಯ ಪಾಠವನ್ನು ಮತ್ತೊಮ್ಮೆ ಕಲಿಸಿದೆ.

ಟರ್ಕಿ ಅಧ್ಯಕ್ಷ ಎರ್ಡೋಗನ್ ಏನೇ ತೆಗಳಲಿ, ವಿಪತ್ಕಾಲದಲ್ಲಿ ಅವನ್ನು ಮರೆತು ಮಾನವೀಯತೆ ಮೆರೆಸಿ, ಅಂತಹ ದೇಶಕ್ಕೂ ತಕ್ಷಣ ಸಹಾಯ ಮಾಡಿದೆ ಭಾರತ. ಈಗ ಟರ್ಕಿ ದೇಶವೇ ಹಾಡಿ ಹೊಗಳುತ್ತಿದೆ ಭಾರತವನ್ನು – ಆಪತ್ತಿಗೆ ಆಗುವವನೇ ನಿಜವಾದ ಗೆಳೆಯ ಎಂದು ಟರ್ಕಿಯ ರಾಯಭಾರಿ ಭಾರತವನ್ನು ಶ್ಲಾಘಿಸಿದ್ದಾರೆ. ಇದಲ್ಲವೇ ನಿಜವಾದ ಜಾಗತಿಕ ಶಾಂತಿಯ ಗುಟ್ಟು?

 

ಇದೇ ಸಂದರ್ಭದಲ್ಲಿ ಯಾವ ದೇಶ ತನ್ನ ಮಿತ್ರ ಎಂದು ಟರ್ಕಿ ಬಗೆದಿತ್ತೋ, ಆ ಪಾಕಿಸ್ತಾನ ಎಂಬ ದೇಶ ಟರ್ಕಿಗೆ ಪರಿಹಾರ ಒಯ್ಯುತ್ತಿದ್ದ ಭಾರತದ ವಿಮಾನಗಳಿಗೆ ಪಾಕಿಸ್ತಾನದ ವಾಯುಕ್ಷೇತ್ರದ ಮೇಲೆ ಹಾರದಂತೆ ನಿರ್ಬಂಧಿಸಿ ರುವುದು ವಿಪರ್ಯಾಸವಲ್ಲವೇ?

 

ಜಗತ್ತು ಶಾಂತಿಯ ಸಂಗತಿಯಲ್ಲಿ ಭಾರತದಿಂದ ಕಲಿಯಬೇಕಾದ್ದು ಬಹಳಷ್ಟಿದೆ. ರೋಟರಿಯ ವಿಶ್ವಶಾಂತಿ ಮಾಸಾಚರಣೆಯ ಸಂದರ್ಭದಲ್ಲಿದು ಪ್ರಸ್ತುತ.

 
 
 
 
 
 
 
 
 
 
 

Leave a Reply