ಪಕ್ಷ ಬೆಳವಣಿಗೆಗೆ ಪ್ರಕೋಷ್ಠ ಪೂರಕ

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ವ ಸ್ಪರ್ಶಿ, ಸರ್ವವ್ಯಾಪಿ. ಪಕ್ಷ ಪದಾಧಿಕಾರಿಯಾಗಿ ವಿವಿಧ ಸ್ತರಗಳಲ್ಲಿ ಜವಾಬ್ದಾರಿ ನಿರ್ವಹಿಸುವುದು ಕಾರ್ಯಕರ್ತರಿಗೆ ಹೆಮ್ಮೆಯ ವಿಚಾರ. ಸಮಾಜದ ವಿವಿಧ ಕ್ಷೇತ್ರಗಳಿಗೆ ಒತ್ತುನೀಡಿ ರಚಿಸಿರುವ 23 ಪ್ರಕೋಷ್ಠಗಳ ಚಟುವಟಿಕೆ ಪಕ್ಷದ ಬೆಳವಣಿಗೆಗೆ ಪೂರಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿವಿಧ ಪ್ರಕೋಷ್ಠಗಳ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕೋಷ್ಠಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಆಯಾ ಕ್ಷೇತ್ರಗಳ ಜನತೆಗೆ ಸರಕಾರದ ವಿವಿಧ ಯೋಜನೆಗಳನ್ನು ತಲುಪಿಸಲು ಸುಲಭ ಸಾಧ್ಯ. ಪಕ್ಷದ ಯಾವುದೇ ಸ್ತರಗಳಲ್ಲಿ ಸಲ್ಲಿಸುವ ಸಮರ್ಪಣಾ ಭಾವದ ಸೇವೆ ಪಕ್ಷದ ಸೇವಾಕಾರ್ಯ ಎನಿಸಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿದಂತಾಗುವುದು. ಪಕ್ಷ, ಕಾಲ ಕಾಲಕ್ಕೆ ನೀಡುವ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಇಂದು ವಿಶ್ವದಲ್ಲೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿದೊಡ್ಡ ರಾಜಕೀಯ ಪಕ್ಷ. ಪ್ರಧಾನಿ ಮೋದಿ ಕರೆಯಂತೆ ಕೋವಿಡ್ 19ನ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ದೇಶಾದ್ಯಂತ ಪಕ್ಷದ ವತಿಯಿಂದ ನಡೆದ ವಿವಿಧ ಸೇವಾ ಚಟುವಟಿಕೆಗಳು ಜನತೆಯ ಪ್ರಶಂಸೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಪ್ರಕೋಷ್ಠಗಳು ಅತ್ಯಂತ ಕ್ರಿಯಾಶೀಲತೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸಂಘಟನಾತ್ಮಕ ವಿಚಾರ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ನಿರೂಪಿಸಿ ವಂದಿಸಿದರು. ಜಿಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳು ಇದ್ದರು.

 
 
 
 
 
 
 
 
 
 
 

Leave a Reply