ಉಡುಪಿ : ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಭೆ 

ಉಡುಪಿ : ಬಿಜೆಪಿ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಭೆಯು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನವೆಂಬರ್ 11ರಂದು ನಡೆಯಿತು.

ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಹ ಸಂಚಾಲಕ ಪ್ರಕಾಶ್ ಮಂಡೋತ್ ರವರು ಮಾತನಾಡಿ, ಅಂತಾರಾಷ್ಟ್ರೀಯ ಶಿಕ್ಷಣ ನಗರಿ ಹಾಗೂ ಟೆಂಪಲ್ ಟೌನ್ ಎಂದು ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವೈವಿಧ್ಯಮಯ ಉದ್ದಿಮೆ, ವ್ಯವಹಾರಗಳಿಗೆ ವಿಪುಲ ಅವಕಾಶವಿದೆ. ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದಿಂದ ಈ ಅವಕಾಶದ ಸದ್ಬಳಕೆ ಆಗುವಂತಾಗಬೇಕು. 

ಪ್ರಸಕ್ತ ಜಿಲ್ಲೆಯಲ್ಲಿರುವ ವಿವಿಧ ರಂಗಗಳ ವ್ಯಾಪಾರಸ್ಥರನ್ನು ಒಗ್ಗೂಡಿಸಿ ಪಕ್ಷದ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿಪರ ಚಿಂತನೆಗಳನ್ನು ಪ್ರಚಲಿತಗೊಳಿಸುವ ಜೊತೆಗೆ ಹೊಸ ಉದ್ದಿಮೆ ಹಾಗೂ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸುವ ಯುವಶಕ್ತಿಗೆ ಉತ್ತೇಜನ ನೀಡುವ ಕೆಲಸ ಕಾರ್ಯಗಳು ಆಗಬೇಕಿದೆ.

ಬುದ್ಧಿವಂತರ ಜಿಲ್ಲೆ ಎಂದೆನಿಸಿಕೊಂಡಿರುವ ಉಡುಪಿ ಜಿಲ್ಲೆಯ ಪ್ರಭಾವಿ ಕೇಂದ್ರ ಮತ್ತು ರಾಜ್ಯ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರ ಸಹಿತ ಪಕ್ಷದ ಕ್ರಿಯಾಶೀಲ ಮುಖಂಡರ ಸಹಕಾರದೊಂದಿಗೆ ಪ್ರಕೋಷ್ಠದ ಚಟುವಟಿಕೆಗಳು ವೇಗವನ್ನು ಪಡೆದು ರಾಜ್ಯದಲ್ಲೇ ಮಾದರಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಎಂಬ ಹೆಗ್ಗಳಿಕೆ ಪಾತ್ರವಾಗುವಂತಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಲು ರಾಜ್ಯ ತಂಡ ಸದಾ ಸಿದ್ದ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಉಡುಪಿ ಜಿಲ್ಲೆ ಶಿಕ್ಷಣ, ಬ್ಯಾಂಕಿಂಗ್, ಕೃಷಿ, ಮೀನುಗಾರಿಕೆ ಕ್ಷೇತ್ರದ ಜೊತೆಗೆ ವ್ಯಾಪಾರ, ವಾಣಿಜ್ಯದಲ್ಲೂ ಮುಂಚೂಣಿಯಲ್ಲಿದೆ. 

ರಾಜ್ಯ ತಂಡದ ಸಮಯೋಚಿತ ಮಾರ್ಗದರ್ಶನ ಮತ್ತು ವಿಚಾರ ವಿನಿಮಯದ ಸದುಪಯೋಗವನ್ನು ಪಡೆದು ವಿನೂತನ ಕಾರ್ಯಕ್ರಮಗಳೊಂದಿಗೆ ಉಡುಪಿ ಜಿಲ್ಲೆಯ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಒಂದು ಮಾದರಿ ಪ್ರಕೋಷ್ಠವಾಗಿ ಮೂಡಿಬರುವಂತಾಗಲಿ ಎಂದರು.

ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅನಿಲ್ ಒಡೆಯರ್, ರಾಜ್ಯ ಸಮಿತಿ ಸದಸ್ಯ ಮತ್ತು ಉಡುಪಿ ಜಿಲ್ಲಾ ಪ್ರಭಾರಿ ರಾಮಕೃಷ್ಣ ರಾವ್ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕುಮಾರ್ ಉದ್ಯಾವರ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಂಚಾಲಕ ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಸಹ ಸಂಚಾಲಕ ಸಚಿನ್ ಜಿ. ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply