ಕೋವಿಡ್ ಲಸಿಕೆ ವಿತರಣೆಯಲ್ಲಿ ರಾಜಕೀಯ ಮಾಡಬೇಡಿ: ವೆರೋನಿಕಾ ಕರ್ನೆಲಿಯೋ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಿಸುವಲ್ಲಿ ರಾಜಕೀಯ ಬೆರೆಸುತ್ತಿರುವ ವಾಸನೆ ಬರುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಿ ಎಲ್ಲರಿಗೂ ಸೂಕ್ತ ಸಮಯದಲ್ಲಿ ಲಸಿಕೆ ಲಭಿಸುವಂತೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ಯಾನಲಿಸ್ಟ್ ವೇರೊನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ. 

ರಾಜ್ಯದಲ್ಲಿ ಕೋವಿಡ್ ಲಸಿಕೆ ಸೂಕ್ತ ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಜಿಲ್ಲೆಯೂ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಮೊದಲ ಡೋಸ್ ಪಡೆದವರಿಗೆ ಇನ್ನೂ ಕೂಡ ಎರಡನೇ ಡೋಸ್ ಲಸಿಕೆ ನೀಡಿಲ್ಲ. ಕಳೆದ ಹಲವು ದಿನಗಳಿಂದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಸಂಪೂರ್ಣವಾಗಿ ನಿಂತು ಹೋಗಿದ್ದು ದೂರದ ಗ್ರಾಮಾಂತರ ಪ್ರದೇಶದ ಹಿರಿಯ ಜೀವಗಳು ಜಿಲ್ಲಾಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲೂ ಕೂಡ ಕಳೆದ ನಾಲ್ಕೈದು ದಿನಗಳಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಪೊರೈಕೆಯಾಗದೆ ಇರುವುದು ವಿಷಾದನೀಯ ಸಂಗತಿ ಎಂದಿದ್ದಾರೆ.

ಶನಿವಾರ ಲಸಿಕೆ ಪೊರೈಕೆಯಾಗುವ ಕುರಿತು ಮುಂಚಿತವಾಗಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದ ಜಿಲ್ಲಾಡಳಿತ ಅದನ್ನು ಅರ್ಹ ವ್ಯಕ್ತಿಗಳಿಗೆ ವ್ಯವಸ್ಥಿತವಾಗಿ ವಿತರಣೆಗೆ ವ್ಯವಸ್ಥೆ ಮಾಡದಿರುವುದು ಬೇಸರದ ಸಂಗತಿಯಾಗಿದೆ.ಮೊದಲು ಬಂದು ಟೋಕನ್ ಪಡೆದರೂ ಕೂಡ ಕೆಲವು ರಾಜಕೀಯ ಪಕ್ಷದ ನಾಯಕರು ಲಸಿಕಾ ಕೇಂದ್ರದಲ್ಲಿ ಕುಳಿತು ಅವರಿಗೆ ಬೇಕಾದ ವ್ಯಕ್ತಿಗಳು ತಡವಾಗಿ ಬಂದರೂ ಅವರಿಗೆ ಲಸಿಕೆಯನ್ನು ಹಾಕಿಸಿ ಕಳುಹಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ನಡುವೆ ಬೆಳಿಗ್ಗೆಯಿಂದ ಊಟ ತಿಂಡಿ ಎಲ್ಲವನ್ನೂ ಬಿಟ್ಟು ಟೋಕನ್ ಪಡೆದು ಕಾದು ಕುಳಿತವರಿಗೆ ಮಧ್ಯಾಹ್ನವಾಗುವ ಲಸಿಕೆ ಖಾಲಿಯಾಗಿದೆ ಎಂದು ತಿಳಿಸಿ ವಾಪಾಸು ಕಳಹಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡದೆ ಜಿಲ್ಲಾಸ್ಪತ್ರೆಯಲ್ಲಿ ಕೂಡ ಮೊದಲು ಬಂದವರಿಗೆ ಲಸಿಕೆ ನೀಡದೆ ರಾಜಕೀಯ ಮಾಡಿರುವುದು ಖಂಡನೀಯವಾಗಿದೆ.ಅಲ್ಲದೆ ಜಿಲ್ಲಾಡಳಿತ ಮತ್ತು ಅದರ ಅಧಿಕಾರಿಗಳು ಲಸಿಕಾ ಕಾರ್ಯಕ್ರಮ ನಡೆಸುವಾಗ ನಿಗದಿತ ಪಕ್ಷದ ಸಹಾಯ ಕೇಂದ್ರದ ಅಗತ್ಯತೆ ಏನಿದೆ? ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿದೆ ಇಲ್ಲವಾದಲ್ಲಿ ಅರ್ಹ ವ್ಯಕ್ತಿಗಳು ಲಸಿಕೆಯಿಂದ ವಂಚಿತರಾಗಬೇಕಾದ ಪರಿಸ್ಥಿತಿ ಉಂಟಾಗತ್ತದೆ. ಸರಕಾರ ಮತ್ತು ಸ್ಥಳೀಯ ಶಾಸಕರು ಇನ್ನಾದರೂ ಎಚ್ಚೆತ್ತು ಲಸಿಕೆಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಕರ್ನೆಲಿಯೋ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply