ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಕಾರ್ಯಾಗಾರ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇದರ ಯೂತ್ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರವು ಶುಕ್ರವಾರದಂದು ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾಘಟಕದ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ತುರ್ತು ಪರಿಸ್ಥಿತಿ ಯಾವಾಗ ಮತ್ತು ಯಾರಿಗೆ ತೊಂದರೆ ನೀಡುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ. ಆದರೆ ಅಂತಹ ಸಂದರ್ಭಗಳಲ್ಲಿ ಪರಿಣತ ಪ್ರಥಮ ಚಿಕಿತ್ಸಕರಿದ್ದರೆ ಸಾವು ನೋವುಗಳನ್ನು ತಪ್ಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ರೆಡ್‌ಕ್ರಾಸ್‌ನ ಆಶಯದಂತೆ ಯುವ ಜನರು ಪ್ರಥಮ ಚಿಕಿತ್ಸೆಯ ಪರಿಣತಿಯನ್ನು ಪಡೆದುಕೊಂಡು ಸಮಾಜಕ್ಕೆ ಸಹಾಯ ಮಾಡುವ ಪ್ರವೃತ್ತಿಯನ್ನು ಹೊಂದಬೇಕು” ಎಂದರು.

 ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ವಹಿಸಿ ಮಾತನಾಡಿ “ಇತರರ ಕಷ್ಟಕ್ಕೆ ಸ್ಪಂಧಿಸುವ ಎಲ್ಲರ ಒಳಿತಿಗಾಗಿ ಕೆಲಸ ಮಾಡುವ ಸಾಮಾಜಿಕ ಜವಾಬ್ದಾರಿ ಇಂದಿನ ಯುವ ಜನರ ಮೇಲಿದೆ. ಪ್ರಥಮ ಚಿಕಿತ್ಸಾ ಕೌಶಲಗಳನ್ನು ವೃದ್ಧಿಸಿಕೊಂಡು ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿ” ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. 

 

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಪ್ರಥಮ ಚಿಕಿತ್ಸಾ ತರಬೇತಿದಾರ ಡಾ. ಕೀರ್ತಿ ಪಾಲನ್ ಪ್ರಥಮ ಚಿಕಿತ್ಸೆಯ ಸಿದ್ಧಾಂತಗಳನ್ನು ಹಾಗೂ ಪ್ರಕ್ರಿಯೆಯನ್ನು ವಿಸ್ತಾರವಾಗಿ ವಿವರಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಹಾಗೂ ಯೂತ್ ರೆಡ್‌ಕ್ರಾಸ್ ಡೈರೆಕ್ಟರ್ ಸುನಿಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಯೂತ್ ರೆಡ್‌ಕ್ರಾಸ್ ಸಂಚಾಲಕ ಪ್ರೊ. ಉದಯ ಶೆಟ್ಟಿ ಕೆ. ಪ್ರಸ್ತಾವಿಸಿ, ಸ್ವಾಗತಿಸಿದರು.ಮೇಘ ಕಾರ್ಯಕ್ರಮ ನಿರೂಪಿಸಿ, ದಿವ್ಯಾ ವಂದಿಸಿದರು.

 
 
 
 
 
 
 
 
 
 
 

Leave a Reply