ಪ್ರಜ್ಯೋತಿ – 2023

​ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ‘ಪ್ರಜ್ಯೋತಿ – 2023’ ದಿನಾಂಕ 05.11.23 ರಂದು ಭಾವಪ್ರಕಾಶ ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ 1994ನೇ ವರ್ಷದ ಹಳೆವಿದ್ಯಾರ್ಥಿ,  ಬಳ್ಳಾರಿಯ ಶ್ರೀನಿವಾಸ ಕ್ಲಿನಿಕ್‌ನ ಡಾ. ಗೋಪಿಕೃಷ್ಣರವರು ‘ಕ್ಲಿನಿಕಲ್ ಎಪ್ಲಿಕೇಶನ್ ಆಫ್ ರಸೌಷಧೀಸ್ ಇನ್ ಜನರಲ್ ಪ್ರಾಕ್ಟೀಸ್’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದೊ೦ದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧಾರವಾಡ ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಒಳ ಹಾಗೂ ಹೊರ ರೋಗ ವಿಭಾಗ ದಲ್ಲಿ ದಾಖಲಾಗುವ ರೋಗಿಗಳು ಕಾಲೇಜಿನ ಹಳೆ ವಿದ್ಯಾರ್ಥಿಗಳ ಮೇಲಿನ ವಿಶ್ವಾಸದಿಂದ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ. 
ನಮ್ಮ ಸಂಸ್ಥೆಯು ನಡೆಸುತ್ತಿರುವ 3 ಆಯುರ್ವೇದ ಆಸ್ಪತ್ರೆಗಳಲ್ಲೂ ಹೆಚ್ಚಿನ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯವನ್ನು ನೀಡಿ ಆರೋಗ್ಯ ಸುಧಾರಿಸುವ ಕಾರ್ಯವನ್ನು ನಡೆಸಿದಂತಹ ಸಂತೃಪ್ತಿ ನನಗಿದೆ ಎಂದರು. ಆಯುರ್ವೇದ ಕೂಡಾ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ಅತಿಥಿಗಳನ್ನು ಸ್ವಾಗತಿಸಿ, ಹಳೆವಿದ್ಯಾರ್ಥಿ ಸಂಘದ ಕಾರ್ಯ ವಿಧಾನಗಳನ್ನು ಶ್ಲಾಘಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಭರತೇಶ್ ಎ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ‘ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ವ್ಯಕ್ತಿಗಳ ಮೆಲುಕು ಹಾಕುತ್ತಾ ವೃತ್ತಿ ಕ್ಷೇತ್ರದಲ್ಲಿ ತೊಡಗುವಂತೆ ಜನ್ಮ ನೀಡಿದ ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿಗಳ ಸಂಬ೦ಧವು ತಾಯಿ ಮಗುವಿನ ಕರುಳಿನ ಸಂಬ೦ಧದ೦ತೆ ಇರಬೇಕು’ ಎಂದರು.

ಈ ಸಂದರ್ಭದಲ್ಲಿ 1984-85ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿ ಇಲ್ಲಿನ 1984 ಸಾಲಿಗೆ ಪ್ರವೇಶ ಹೊಂದಿ ಪದವೀದರರಾದ ವಿದ್ಯಾರ್ಥಿ ಸಮೂಹ-ಚಿರಂತನ 1984 ಇವರು ಪ್ರತೀ ವರ್ಷ ದಂತೆ ಈ ವರ್ಷವೂ ಕೂಡ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಬಾರಿ ಹಿರಿಯ ವಿದ್ಯಾರ್ಥಿಗಳು ರೋಗನಿದಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಬಿ.ವಿ. ಪ್ರಸನ್ನರವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. 

ಬಳಿಕ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯಧನವಿತ್ತವರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಳೆವಿದ್ಯಾರ್ಥಿಗಳಿಗೆ ವಿಶೇಷ ಸವಲತ್ತುಗಳನ್ನೊಳಗೊಂಡ ಕಾರ್ಡನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾಸನ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ಎನ್. ರಾವ್‌ರವರು ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿಗಳ ಸಾಧನೆಯನ್ನು ಉಲ್ಲೇಖಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಡಾ. ನಾರಾಯಣ ಟಿ. ಅಂಚನ್‌ರವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಮೊಹಮ್ಮದ್ ಇಕ್ಬಾಲ್ ಅವರು ವಂದಿಸಿದರು. ಸಹಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಶುಭ ಪಿ.ಯುರವರು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 

Leave a Reply