ತೆಂಕುತಿಟ್ಟಿನ ಯಕ್ಷಗಾನ ರಂಗದ ದಿಗ್ಗಜ ಬಲಿಪ ನಾರಾಯಣ ಭಾಗವತ ಅಸ್ತಂಗತ

ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ, ಪರಂಪರೆಯ ಬಹುದೊಡ್ಡ ಕೊಂಡಿ, ಅಪಾರ ಯಕ್ಷಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಬಲಿಪ ನಾರಾಯಣ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ನಿಧನರಾದರು.

ಯಕ್ಷಗಾನ ಭಾಗವತಿಕೆಯ ಮೇರು ಶಿಖರ ಎನಿಸಿಕೊಂಡಿದ್ದ ಬಲಿಪ ಭಾಗವತರು ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದವರು. ತನ್ನ ಕಂಚಿನ ಕಂಠದ ಮೂಲಕ ಸಾವಿರಾರು ಕಲಾವಿದರನ್ನು ಕುಣಿಸಿ ಸಮರ್ಥ ನಿರ್ದೇಶಕ ಎಂಬ ನೆಗಳ್ತೆಗೆ ಪಾತ್ರರಾಗಿದ್ದರು. ಏರುಪದಗಳ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದರು. ಇವರ ಪುತ್ರ ಬಲಿಪ ಪ್ರಸಾದ್‌ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆಯವರಾದ ಬಲಿಪ ನಾರಾಯಣ ಭಾಗವತರು 1938ರಲ್ಲಿ ಜನಿಸಿದ್ದರು. ತಮ್ಮ ಅಜ್ಜನ ಮೂಲಕವೇ ಸಣ್ಣಂದಿನಲ್ಲೇ ಯಕ್ಷಗಾನ ಭಾಗವತಿಕೆ ಕಲಿತುಕೊಂಡಿದ್ದ ಬಲಿಪರು 60 ವರ್ಷಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಮಗನ ಜೊತೆಗೆ ಮೂಡುಬಿದಿರೆ ಸಮೀಪದ ನೂಯಿ ಎಂಬಲ್ಲಿ ನೆಲೆಸಿದ್ದರು. 

ಮಗ ಪ್ರಸಾದ್ ಬಲಿಪ ಅವರೂ ಭಾಗವತಿಕೆ ಶುರು ಮಾಡಿದ ಬಳಿಕ ಹಿರಿಯ ಬಲಿಪ, ಕಿರಿಯ ಬಲಿಪ ಎನ್ನುವ ವಿಭಜನೆಯನ್ನು ಯಕ್ಷಗಾನದ ಅಭಿಮಾನಿಗಳೇ ಮಾಡಿಕೊಂಡಿದ್ದರು. ಯಾವುದೇ ಪ್ರಸಂಗ ಇದ್ದರೂ ಇಳಿ ವಯಸ್ಸಿನಲ್ಲೂ ಕಂಠ ಪಾಠ ಹೊಂದಿದ್ದ ಅಪರೂಪದ ಪ್ರತಿಭೆ ಬಲಿಪರದ್ದು. 

ಭಾಗವತಿಕೆ ಜೊತೆಗೆ 35ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಅದ್ಭುತ ಸಿರಿಕಂಠ ಇದ್ದರೂ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ ಅವರದಾಗಿತ್ತು. ಯಾರೇ ಮಾತನಾಡಿಸಿದರೂ, ಅತ್ಯಂತ ವಿನಯದಿಂದ ಮಾತನಾಡಿಸುತ್ತಿದ್ದರು. ಕಟೀಲಿನ ದೇವಿ ಮಹಾತ್ಮೆ ಯಕ್ಷಗಾನಕ್ಕೆ ಹೊಸ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದೂ ಇವರ ಹೆಗ್ಗಳಿಕೆ. ಕಟೀಲು ಮೇಳವಲ್ಲದೆ, ಆ ಕಾಲದ ಕುಂಡಾವು, ರೆಂಜಾಳ, ಕೂಡ್ಲು ಮೇಳದಲ್ಲಿಯೂ ಇವರು ಕಲಾಸೇವೆ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಬಹಳಷ್ಟು ಪ್ರಶಸ್ತಿ, ಬಿರುದುಗಳು ಅವರಿಗೆ ಸಂದಿದ್ದವು.

 
 
 
 
 
 
 
 
 
 
 

Leave a Reply