ಅಗಲಿದ ಸಾಹಿತ್ಯ, ಯಕ್ಷಗಾನ, ನಾಟಕ ರಂಗದ ಮೇರು ಚೇತನ

ಸಾಹಿತ್ಯ, ಕಲೆ, ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿರುವ ಶ್ರೀ ಅಂಬಾತನಯ ಮುದ್ರಾಡಿಯವರು ಇಂದು ಫೆ.21ರ ಬೆಳಿಗ್ಗೆ 7.30ಕ್ಕೆ ದೈವಾಧೀನರಾದರು.

ಯಕ್ಷಗಾನ, ತಾಳಮದ್ದಲೆ, ಹರಿಕಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು. ಹಲವಾರು ಸಾಹಿತ್ಯ, ನಾಟಕ ಕೃತಿಗಳನ್ನು ರಚಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ, ಅಕಾಡೆಮಿ ಪುರಸ್ಕಾರಗಳೊಂದಿಗೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಇವರಿಗೆ, 2005ರಲ್ಲಿ ರಂಗಭೂಮಿ (ರಿ.) ಉಡುಪಿ ಸಂಸ್ಥೆಯು ” ಸಾಹಿತ್ಯ ಕಲಾ ವಾಚಸ್ಪತಿ” ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ನೀಡಿದ್ದಲ್ಲದೆ. 2017ರ ” ಆನಂದೋತ್ಸವ”ದ ಸಂದರ್ಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ ಕೊಡಮಾಡುವ ” ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಪ್ರಶಸ್ತಿ” ಯನ್ನೂ ನೀಡಿ ಕೃತಾರ್ಥವಾಗಿತ್ತು. ಈ ಮಹಾನ್ ಚೇತನಕ್ಕೆ ರಂಗಭೂಮಿ ಸಂಸ್ಥೆಯ ಭಾವಪೂರ್ಣ ಶ್ರದ್ಧಾಂಜಲಿ.

ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ, ಸಮಾಜದ ಎಲ್ಲ ಮಂದಿಗೆ ಮನೆಯ ಸದಸ್ಯನಂತೆ ಇದ್ದು ಮಾರ್ಗದರ್ಶನ ಮಾಡಿ ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ.

ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡದ್ದು ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಪತ್ನಿ, ಮೂವರು ಪುತ್ರರು,ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವ್ರಂದವನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗವು ಅವರನ್ನು ಗೌರವಿಸಿದ್ದು ಸಂಸ್ಥೆಗೆ ಸದಾ ಮಾರ್ಗದರ್ಶನ ನೀಡುತ್ತಾ ಬಂದ ಅಂಬಾತನಯರ ಅಗಲುವಿಕೆಗೆ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗಲಿದ ಪೂಜ್ಯ ಅಂಬಾತನಯರ ಅಂತಿಮ ವಿಧಿವಿಧಾನಗಳು ನಾಳೆ ಫೆ 22ರ ಬೆಳಿಗ್ಗೆ 9.30ಕ್ಕೆ ಮುದ್ರಾಡಿ ಯು ಅವರ ಮನೆಯಲ್ಲಿ ನಡೆಯಲಿರುವುದು ಎಂದು ಅವರ ಮಕ್ಕಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply