ತೆಂಕನಿಡಿಯೂರು ಕಾಲೇಜು:ಪ್ರಥಮ ವರ್ಷ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರು ಇದರ 2020-21ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಮಂಗಳವಾರದಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.  
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಐ.ಎ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿ “ಶಿಕ್ಷಣ ಮತ್ತು ಉದ್ಯೋಗ ನಡುವಿನ ಅಂತರವನ್ನು ಕೌಶಲ್ಯ ಮತ್ತು ನೈಪುಣ್ಯತೆಯ ಮೂಲಕ ಕಡಿಮೆಗೊಳಿಸಬೇಕು.  ವಿದ್ಯಾರ್ಥಿ ಜೀವನದಲ್ಲಿ ಪರಿಣಾಮಕಾರಿಯಾದ ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡಲ್ಲಿ ಉಜ್ವಲ ಭವಿಷ್ಯವನ್ನ ಎದುರು ನೋಡಬಹುದು.  
ಗುರಿಯಲ್ಲಿ ಸ್ಪಷ್ಟತೆ ನಿಖರತೆ ಇರಬೇಕಾದರೆ ಗುರಿ ಸಾಧಿಸುವ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ಸಾಗಬೇಕು.  ವಿದ್ಯಾರ್ಥಿ ಜೀವನದಲ್ಲಿಯೇ ಗುರಿಗಳನ್ನು ಇಟ್ಟಲ್ಲಿ ಅದನ್ನು ಸಾಧಿಸುವ ಮಾರ್ಗಗಳು ಸುಗಮವಾಗುತ್ತವೆ.  
ವಿದ್ಯಾರ್ಥಿಗಳು ಗುಂಪು ಚರ್ಚೆ, ಸಮಾನ ಮನಸ್ಕರ ಜೊತೆಗೆ ಹೆಚ್ಚು ಬೆರೆಯುವ ಮೂಲಕ ಸ್ವ ಪ್ರಯತ್ನಗಳಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಕರೆ ನೀಡಿದರು.

 ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಸೂರ್ಯನಂತೆ ಪ್ರಕಾಶಿಸಬೇಕಾದರೆ ಸೂರ್ಯನಂತೆ ಉರಿಯಲು ವಿದ್ಯಾರ್ಥಿಗಳು ಕಲಿಯಬೇಕು.  ರಾಮಕೃಷ್ಣ ಪರಮಹಂಸರು ಒಳ್ಳೆಯ ಗುರುಗಳಾಗಿ ಮಾರ್ಗದರ್ಶನ ನೀಡಿದ ಪರಿಣಾಮ ಸ್ವಾಮಿ ವಿವೇಕಾನಂದರಂತಹ ಸಾಧಕರ ಉಗಮವಾಯಿತು. ಅದೇ ರೀತಿ ಹಿಂದೆ ಗುರು ಮತ್ತು ಮುಂದೆ ಗುರಿ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ” ಎಂದರು.  

ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿ ಸಿದರು.  ರಾಜ್ಯಶಾಸ್ತ್ರ  ವಿಭಾಗ ಮುಖ್ಯಸ್ಥ ಶ್ರೀ ಮಂಜುನಾಥ ಉದ್ಘಾಟಕರನ್ನು ಪರಿಚಯಿಸಿದರು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀ ಉಮೇಶ್ ಪೈ ವಂದನಾರ್ಪಣೆಗೈದರು.  ಶ್ರೀ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. 
 
 
 
 
 
 
 
 
 
 
 

Leave a Reply