ರತ್ನಾವತಿಕಲ್ಯಾಣ -ಕುಮಾರವಿಜಯ~ ಪ್ರಸಂಗನಡೆ – ರಂಗತಂತ್ರ.

ನಂದಳಿಕೆಯ ಲಕ್ಷ್ಮೀನಾರಾಯಣಯ್ಯ ಅಂದರೆ ಮಹಾಕವಿ ಮುದ್ದಣನೆಂದೇ ಪ್ರಸಿದ್ದರು.ತನ್ನ‌ ಕಾವ್ಯ‌ ರಚನೆಯ ಪೂರ್ವಭಾವೀಯಾಗಿ ರತ್ನಾವತಿ ಕಲ್ಯಾಣ ಮತ್ತು ಕುಮಾರವಿಜಯ ಪ್ರಸಂಗಗಳನ್ನು‌‌ಬರೆಯುವುದರ ಮೂಲಕ ಯಕ್ಷಗಾನ ಪದ್ಯರಚನೆಯಲ್ಲಿ ಒಂದು ಹೊಸಯುಗವನ್ನೇ ತೆರೆದವರು.

ಪದ ಪ್ರಯೋಗ ಮತ್ತು ಹೊಸ ಛಂದಸ್ಸುಗಳ ರೀತಿ ತುಂಬಾ ಪ್ರಭಾವಿಯಾಗಿವೆ.ಈ ಎರಡು ಪ್ರಸಂಗಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ತೆಂಕು ಮತ್ತು‌ ಬಡಗು ಎರಡೂ ತಿಟ್ಟುಗಳಲ್ಲಿ ಬಹಳಷ್ಟು ಪ್ರದರ್ಶನಗೊಂಡು ತಿರಿಗಾಟದ ಮುಖ್ಯ ಪ್ರಸಂಗಗಳಾಗಿ ಪ್ರಸಿದ್ಧವಾಗಿದ್ದುವು.ಇನ್ನೊಂದು ವಿಶೇಷ ; ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯಗಳು ಪ್ರಚಾರಕ್ಕೆ ಬಂದ ಮೇಲೆ ಭಾಗವತಿಕೆ ಪಾಠಗಳಲ್ಲಿ ಕಲಿಸುವಿಕೆಯಲ್ಲಿ ಮುಖ್ಯವಾದ ಎರಡು ಪಠ್ಯಗಳಾಗಿಯೂ ಪ್ರಸಿದ್ಧವಾಗಿದ್ದುವು.

“ರತ್ನಾವತಿ ಕಲ್ಯಾಣ”ವು ಬಡಗುತಿಟ್ಟಿನವರಿಗೆ ಹಾಗೂ “ಕುಮಾರ ವಿಜಯ”ವು ತೆಂಕು‌ತಿಟ್ಟಿನವರಿಗೆ ಅನುಕೂಲ ಎಂದು ಪರಿಗಣಿತವಾಗಿ ಪ್ರದರ್ಶನಗಳಾಗುತ್ತಿದ್ದುವು,ಇವತ್ತಿಗೂ‌ ಪ್ರಶಂಸೆಗೆ ಪಾತ್ರವಾಗುತ್ತಿವೆ. ಈ ಪ್ರಸಂಗಳ ಯಾವ ಪದ್ಯವನ್ನೂ ಬಿಡದೆ ಹಾಡಿಸಿ ದಾಖಲಿಸಿದ ಕೆಲಸ ಎಂಟು ವರ್ಷಗಳ ಹಿಂದೆಯೇ ನಡೆದಿತ್ತು.ಕುಮಾರವಿಜಯದ ಏಳು ನೂರು ಪದ್ಯಗಳನ್ನು ದಿ.ಬಲಿಪ‌ನಾರಾಯಣ ಭಾಗವತರು,ತನ್ನ ಪುತ್ರ ಪ್ರಸಾದ ಬಲಿಪ ಹಾಗೂ ಶಿವಶಂಕರ ಬಲಿಪ ಮತ್ತು ಬಲಿಪರ ಸೋದರಳಿಯ ಗೋಪಾಲಕೃಷ್ಣ ಭಾಗವತರೊಂದಿಗೆ ಹಾಡಿದ್ದಾರೆ.

ಪ್ರಾರಂಭದಿಂದ ಅಂತ್ಯದವರೆಗೆ ರಂಗನಡೆ ಹಾಗೂ‌‌ ರಂಗ ತಂತ್ರಕ್ಕನುಗುಣವಾಗಿ ನುಡಿತಗಳಿವೆ. ಪ್ರಸಂಗ ಪ್ರದರ್ಶನವನ್ನು ನೋಡಿದ ಅನುಭವವು‌ ಕೇಳುಗನಿಗೆ ಆಗುವಂತಿದೆ.ಇದಕ್ಕೆ ದಿ.ಬಲಿಪರು ಸ್ವತಃ‌ಬರೆದ ರಂಗ ಟಿಪ್ಪಣೆ ಇರುವ ಪುಸ್ತಕ “ರತ್ನಾವತಿಕಲ್ಯಾಣ – ಕುಮಾರವಿಜಯ ; ಪ್ರಸಂಗನಡೆ – ರಂಗತಂತ್ರ” ಗಮನಿಸಬಹುದು.
ಬಡಗುತಿಟ್ಟಿನ ಭಾಗವತರಾದ ವಿದ್ವಾನ್ ಗಣಪತಿ ಭಟ್ ಹಾಗೂ ಹೆರಂಜಾಲು ಗೋಪಾಲ ಗಾಣಿಗ ಅವರು ಜೊತೆಯಾಗಿರತ್ನಾವತಿ ಕಲ್ಯಾಣ ಪ್ರಸಂಗಕ್ಜಾಗಿ ಹಾಡಿದ್ದಾರೆ.

ಗೋಪಾಲ ಗಾಣಿಗ ಹಾಗೂ ನಿತ್ಯಾನಂದ ಹೆಬ್ಬಾರ್ ಅವರು ಬರೆದಿರು ರಂಗಟಿಪ್ಪಣಿಯು ಈಪುಸ್ತಕದಲ್ಲಿ ದಾಖಲಾಗಿದೆ. ಕುಮಾರವಿಜಯದಂತೆಯೇ ಈ‌ ಪ್ರಸಂಗದ ಧ್ವನಿ ಮುದ್ರಣ ನಡೆದಿದೆ. ಕವಿ ಮುದ್ದಣನ ಬಗ್ಗೆ,ಬಲಿಪ ಭಾಗವತರ ಬಗ್ಗೆ ಯಕ್ಷಗಾನ ವಿದ್ವಾಂಸರು ಬರೆದ ಪ್ರತಿಕ್ರಿಯೆಗಳೂ ಸಂದೇಶದ ರೂಪದಲ್ಲಿ ಈ ಪುಸ್ತಕ‌ ಒಳಗೊಂಡಿದೆ. ಅಭ್ಯಾಸ ಮಾಡುವ ಭಾಗವತರಿಗೆ,ಈ ಎರಡು ಪ್ರಸಂಗಗಳ ಪ್ರಯೋಗ ವಿಧಾನವನ್ನು ತಿಳಿಯಬೇಕೆಂಬ ಆಸಕ್ತರಿಗೆ ಈ ಪುಸ್ತಕ ಹಾಗೂ ಧ್ವನಿ ಮುದ್ರಣ ಮಾರ್ಗದಶಿಯಾಗಲಿದೆ.

ಬಲಿಪರ ಪರಂಪರೆ ಹಾಗೂ ಬಡಗುತಿಟ್ಟಿನ ಒಂದುಕಾಲದ ಸಂಪ್ರದಾಯವು ದ್ವನಿಮುದ್ರಣದಲ್ಲಿ ಅಡಕವಾಗಿದೆ. ಸುಶ್ರಾವ್ಯವಾದ ಯಕ್ಷಗಾನ ಹಾಡುಗಾರಿಕೆ ಪರಂಪರೆಯ ಚೌಕಟ್ಟಿನೊಳಗೆ ಮೂಡಿಬಂದಿದೆ.ಫೆ.17 ರಂದು ಮೂಡುಬಿದ್ರಿಯ ಅಲಂಗಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧ್ವನಿ‌ಮುದ್ರಣ ಹಾಗೂ ಪುಸ್ತಕ ಲೋಕಾರ್ಪಣೆ ಯಾಗಲಿದೆ.ಎಂದು ನಂದಳಿಕೆಯ ಮುದ್ದಣ ಪ್ರಕಾಶನ‌ದ ಅಧ್ಯಕ್ಷ ನಂದಳಿಕೆ ಬಾಲಚಂದ್ರರಾವ್ ಹಾಗೂ‌ ಬಲಿಪಗಾನ ಯಾನದ ಚಂದ್ರಶೇಖರ ಭಟ್ ಕೊಂಕಣಾಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

~ ಕೆ. ಎಲ್. ಕುಂಡಂತಾಯ 

 
 
 
 
 
 
 
 
 
 
 

Leave a Reply