ದೇಶದ ಕುರಿತು ಪ್ರೀತಿ ಹುಟ್ಟಿಸುವ ಅದ್ಭುತ ನಾಟಕ

ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ 1837 ‘ ನಿನ್ನೆ ಕಾರ್ಕಳದಲ್ಲಿ ಅದ್ಭುತ ಪ್ರದರ್ಶನ ಕಂಡಿತು. ಕನ್ನಡ ಸಾರಸ್ವತ ಲೋಕದ ಅಗ್ರಮಾನ್ಯ ಲೇಖಕರಲ್ಲಿ ಒಬ್ಬರಾದ ಪ್ರಭಾಕರ ಶಿಶಿಲ ಅವರ ರಚನೆಯ ಸುಮಾರು 50 ನಿಮಿಷದ ಈ ನಾಟಕ ಪ್ರೇಕ್ಷಕರ ಮನಗೆದ್ದಿತು.

ಭಾರತದ ಇತಿಹಾಸವನ್ನು ಗಮನಿಸಿದರೆ 1857 ರ ಸಿಪಾಯಿ ದಂಗೆಯನ್ನು ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಎಂದು ಚಿತ್ರಿಸಲಾಗಿದೆ. ಆದರೆ ಇದಕ್ಕಿಂತ ಮೊದಲೇ 1837 ರಲ್ಲಿ ಕಲ್ಯಾಣ ಸ್ವಾಮಿಯ (ಪುಟ್ಟ ಬಸವ) ನೇತೃತ್ವದಲ್ಲಿ ನಡೆದ ರೈತದಂಗೆಯೇ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬ ವಾಸ್ತವವನ್ನು ನಮ್ಮ ತುಳು ಹಾಗೂ ಕನ್ನಡದ ಮಣ್ಣಿಗೆ ಈ ನಾಟಕವು ಮುಟ್ಟಿಸುವ ಮೂಲಕ ಮೈಮನಗಳನ್ನು ರೋಮಾಂಚನಗೊಳಿಸಿತು.

ಪ್ರತಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ನೋಡಲೇಬೇಕಾದ ನಾಟಕ. ಈ ಮೂಲಕ ದೇಶಪ್ರೇಮವನ್ನು ವೀರತ್ವವನ್ನು ಮೈಗೂಡಿಸಿ ಕೊಳ್ಳಲು ಸಾಧ್ಯ. 1837 ರಲ್ಲಿ ಅಮರಸುಳ್ಯ ವನ್ನು ಕೇಂದ್ರವಾಗಿಟ್ಟುಕೊಂಡು ಕೊಡಗು – ಕೆನರಾ ರೈತ ಬಂಡಾಯ ನಡೆಯಿತು.

1834 ರಲ್ಲಿ ಅಮರ ಸುಳ್ಯ ಮತ್ತು ಪುತ್ತೂರು ಗಳನ್ನು ಕೊಡಗಿನಿಂದ ಬೇರ್ಪಡಿಸಿ, ಕೃಷಿಕರ ಮೇಲೆ ಬ್ರಿಟಿಷರು ಹೇರಿದ ಕ್ರೂರ ಕಂದಾಯ ನೀತಿ, ಬಂಡಾಯಕ್ಕೆ ಮೂಲ ಕಾರಣವಾಗಿತ್ತು. 13 ದಿನಗಳ ಕಾಲ ಕೆನರಾ ಜಿಲ್ಲೆ ಆಡಳಿತ ನಡೆಸಿದ ಸತ್ಯ ವಿಷಯ ಈ ನಾಟಕದ ಕಥಾಹಂದರ.

ಈ ನಾಟಕ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರ ಯೋಧರನ್ನು ಸ್ಮರಿಸುವ ಅಪೂರ್ವ ಪ್ರಯೋಗವಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿ, ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಬೇಕೆಂದು ವಿನಂತಿ.

~ ರವಿರಾಜ್ ಹೆಚ್.ಪಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು

 
 
 
 
 
 
 
 
 
 
 

Leave a Reply