ಶಿರ್ವ ಮಹಿಳಾ ಮಂಡಲ-ವಜ್ರ ಮಹೋತ್ಸವ ಕಾರ್ಯಕ್ರಮ

ಉಡುಪಿ : ಜಿಲ್ಲೆಯ ಅತ್ಯಂತ ಹಿರಿಯ ಮಹಿಳಾ ಮಂಡಲಗಳಲ್ಲೊಂದಾಗಿರುವ ಶಿರ್ವ ಮಹಿಳಾ ಮಂಡಲವು ಇದೀಗ ತನ್ನ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಈ ನಿಟ್ಟಿನಲ್ಲಿ ವಜ್ರಮಹೋತ್ಸವ ವರ್ಷದಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧವಾಗಿರುವ ಮಹಿಳಾ ಮಂಡಲವು ತನ್ನ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ಆ ಪ್ರಯುಕ್ತ ಮಹಾತ್ಮ ಗಾಂಧಿಯವರ 75ನೇ ಪುಣ್ಯ ಸ್ಮರಣೆಯ ಅಂಗವಾಗಿ ಅತ್ಯಂತ ಪ್ರಿಯರಾಗಿದ್ದ ಕೊರಗ ಕುಟುಂಬಗಳಿಗೆ ಹೊದಿಕೆಗಳನ್ನು ನೀಡುವುದರ ಜೊತೆಗೆ ಅವರೊಂದಿಗೆ ಭೋಜನದ ಸವಿಯನ್ನು ಸವಿಯುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಜ್ಯೋತಿ ಬೆಳಗಿಸಿ ವಜೃ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಶಿರ್ವ ಮಹಿಳಾ ಮಂಡಲವು ಈ 60ವರ್ಷಗಳಲ್ಲಿ ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ.

ಇವತ್ತಿನ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ ವಾಗಿದೆ.ಗಾಂಧೀಜಿಯವರಿಗೆ ಬಹಳ ಪ್ರಿಯವಾಗಿದ್ದ ಕೊರಗ ಸಮುದಾಯದ ಕುಟುಂಬಗಳನ್ನು ಗುರುತಿಸಿ ಅವರನ್ನು ಈ ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿರುವುದು ಶ್ಲಾಘನೀಯ ಎಂದು ಈ ಸಂದರ್ಭದಲ್ಲಿ ಅವರು ನುಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಹಿಳಾ ಮಂಡಲದ ಎಲ್ಲಾ ಚಟುವಟಿಕೆಗಳಿಗೆ ತಮ್ಮ ಸಹಕಾರ ಯಾವಾಗಲೂ ಇದೆ ಎಂಬ ಭರವಸೆಯನ್ನು ನೀಡಿದರು. ಶಿರ್ವದ ಉದ್ಯಮಿ ಸ್ಟ್ಯಾನ್ಲಿ ಡಯಾಸ್ ಹಾಗೂ ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ಆಶಾ ಆಚಾರ್ಯ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿರ್ವ ಗ್ರಾಮದ ಸುಮಾರು 25ಕುಟುಂಬಗಳಿಗೆ ಹೊದಿಕೆಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಐರಿನ್ ಲುಸ್ರಾದೋ ಅವರು ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು. ಸುನೀತಾ ಸದಾನಂದ್ ಪ್ರಾರ್ಥಿಸಿ,ದೀಪಾ ಶೆಟ್ಟಿ  ವಂದಿಸಿ ಕಾರ್ಯದರ್ಶಿ ಡಾ.ಸ್ಪೂರ್ತಿ ಶೆಟ್ಟಿ  ಕಾರ್ಯಕ್ರಮವನ್ನು ನಿರ್ವಹಿಸಿದರು.

ಹಿರಿಯೆ ರೀಟಾ ಮಥಾಯಸ್, ಪ್ರಫುಲ್ಲ ಶೆಟ್ಟಿ, ಜಯಶ್ರೀ ಶೆಟ್ಟಿ, ಜಯಲಕ್ಷ್ಮಿ ಪೈ,ದೀಪಿಕಾ ಶಾಲೆಟ್ ಡಿ’ಸೋಜ, ಸುಜಾತ ,ಸುಮಾ ಬಾಮನ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿರ್ವದ ಉದ್ಯಮಿಗಳಾದ ಸ್ಟ್ಯಾನ್ಲಿ ಡಯಾಸ್ ಹಾಗೂ ಹಸನ್ ಇಬ್ರಾಹಿಂ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ್ದರು.

 
 
 
 
 
 
 
 
 
 
 

Leave a Reply