ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಅಭ್ಯಾಸ ವರ್ಗ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೈನುಗಾರರ ವಿವಿಧೋದ್ದೇಶ ಸಹಕಾರಿ ಸಂಘಗಳಾಗಿ ಪರಿವರ್ತನೆ : ಸಾಣೂರು ನರಸಿಂಹ ಕಾಮತ್

ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಅಭ್ಯಾಸ ವರ್ಗ ಮಾರ್ಚ್ 9 _ಶನಿವಾರದಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನ “ಉನ್ನತಿ” ಯಲ್ಲಿ ನಡೆಯಿತು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಹೆಗಡೆಯವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ಅಭ್ಯಾಸ ವರ್ಗವು ಸಹಕಾರಿ ಸಂಘಗಳ ಹೊಸ ಕಾಯ್ದೆ ಕಾನೂನುಗಳ ಪರಿಜ್ಞಾನವನ್ನು ಮೂಡಿಸಿಕೊಳ್ಳಲು ಮತ್ತು ಸಹಕಾರಿ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂದು ಶುಭ ಹಾರೈಸಿದರು.

ಬ್ರಹ್ಮಾವರ ತಾಲೂಕು ಸಹಕಾರ ಭಾರತಿ ಅಧ್ಯಕ್ಷರಾದ ಶ್ರೀ ಅಶೋಕ ಪ್ರಭುರವರು ಅಧ್ಯಕ್ಷತೆಯನ್ನು ವಹಿಸಿ, ಬ್ರಹ್ಮಾವರ ತಾಲೂಕಿನ ಎಲ್ಲಾ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸಹಕಾರ ಭಾರತಿ ಮುಂದಿನ ಕಾರ್ಯಯೋಜನೆಯನ್ನು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಭಾರತಿ ದೇಶದ ಏಕೈಕ ಸರಕಾರೇತರ ರಾಜಕೀಯ ರಹಿತ ಸಹಕಾರಿ ಸ್ವಯಂಸೇವಾ ಸಂಸ್ಥೆಯಾಗಿದ್ದು, ಉಡುಪಿ ಜಿಲ್ಲೆಯ ಏಳೂ ತಾಲೂಕುಗಳಲ್ಲಿ ಸಕ್ರಿಯವಾದ ತಾಲೂಕು ಘಟಕದ ಕಾರ್ಯ ಚಟುವಟಿಕೆಗಳ ಮೂಲಕ ಸಹಕಾರಿ ಸಂಸ್ಥೆಗಳ ಬೇಕು ಬೇಡಿಕೆಗಳನ್ನು ಸರಕಾರದ ಮುಂದಿಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, ದೇಶದಲ್ಲಿ ಈಗಾಗಲೇ 8 ಲಕ್ಷ ಸಹಕಾರಿ ಸಂಸ್ಥೆಗಳ ದತ್ತಾಂಶಗಳನ್ನು ಕೇಂದ್ರ ಸರಕಾರವು ಸಹಕಾರಿ ಇಲಾಖೆಯ ಮೂಲಕ ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಏಕರೂಪದ ತಂತ್ರಾಂಶದ ಮೂಲಕ ಸಹಕಾರಿ ಸಂಸ್ಥೆಗಳ ವ್ಯವಹಾರದ ಎಲ್ಲಾ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.

ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿನ ದರ ಏರಿಕೆಯ ಬಗ್ಗೆ ಈ ಹಿಂದೆ ಎರಡು ಬಾರಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಸಹಕಾರ ಭಾರತಿ ಪ್ರತಿಭಟನ ಸಭೆಗಳನ್ನು ನಡೆಸಿ ಸರಕಾರದ ಗಮನವನ್ನು ಸೆಳೆದಿತ್ತು.

ಇದೀಗ ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಬಿಡುಗಡೆ ಮಾಡಲು, ಪಶು ಆಹಾರಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ಸಬ್ಸಿಡಿ ಮತ್ತು ಪ್ರೋತ್ಸಾಹ ಧನವನ್ನು ಈಗಿರುವ ಐದು ರೂಪಾಯಿಯಿಂದ 10 ರೂಪಾಯಿಗೆ ಏರಿಸಲು ಹಾಗೂ 2019 ರ ಜಾನುವಾರು ಗಣತಿಯ ಪ್ರಕಾರ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳನ್ನುಮುಚ್ಚಲು ಹೊರಟಿರುವ ಸರಕಾರದ ನಿರ್ಧಾರದ ವಿರುದ್ಧ ರಾಜ್ಯ ವ್ಯಾಪಿ ಹೋರಾಟವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.

 ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೈನುಗಾರರ ವಿವಿಧೋದ್ದೇಶ ಸಂಘಗಳನ್ನಾಗಿ ಪರಿವರ್ತಿಸಲು, ಲಭ್ಯವಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಮುಂದಿನ ದಿನಗಳಲ್ಲಿ ಸಹಕಾರ ಭಾರತಿ ವಿಚಾರ ಸಂಕಿರಣಗಳನ್ನು ಆಯೋಜಿಸಲಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಮಾಹಿತಿ ಶಿಬಿರದ ಮೊದಲ ಅವಧಿಯಲ್ಲಿ “ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆ”ಯ ಬಗ್ಗೆ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ ಶ್ರೀ ಮೋಹನ್ ಕುಮಾರ್ ಕುಂಬಳೇಕರ್ ರವರು ಸವಿವರ ವಾದ ಮಾಹಿತಿ ಮಾರ್ಗದರ್ಶನ ನೀಡಿದರು.

ಸಹಕಾರಿ ಕಾಯಿದೆ ಮತ್ತು ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಮಂಗಳೂರು ಇದರ ಅಧೀಕ್ಷಕರಾದ ಶ್ರೀ ಎನ್ .ಜೆ. ಗೋಪಾಲ್ ರವರು ಸುಧೀರ್ಘವಾದ ಮಾಹಿತಿ ಮಾರ್ಗದರ್ಶನ ನೀಡಿ ಸಹಕಾರಿಗಳ ಜೊತೆಗೆ ನೇರ ಸಂವಾದ ನಡೆಸಿದರು.

 ಸಹಕಾರ ಭಾರತಿ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರು ಹಾಗೂ ಖ್ಯಾತ ವಕೀಲರಾದ ಶ್ರೀ ಮಂಜುನಾಥ ಎಸ್ಕೆ ಯವರು ರಾಜ್ಯ ಸರಕಾರವು ಸಹಕಾರಿ ಕಾಯ್ದೆಯಲ್ಲಿ ತಂದಿರುವ ನೂತನ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕರಾದ ಶ್ರೀ ಕನ್ನಾರು ಕಮಲಾಕ್ಷ ಹೆಬ್ಬಾರ್ ರವರು ಸ್ವಾಗತಿಸಿ, ಮಂಜುನಾಥ ಆಚಾರ್ಯರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್.ಕೆ .ನಾಯಕ್ ರವರು ಧನ್ಯವಾದ ಸಮರ್ಪಣೆಗೈದರು.

 
 
 
 
 
 
 
 
 
 
 

Leave a Reply