ಕುಂಭಾಶಿಯ ಚಾಲೆಂಜರ್ಸ್ ಫೌಂಡೇಶನ್ (ರಿ) ಕೊಡುಗೆಯಾಗಿ ನೀಡಿದ ಪ್ರಾಕೃತಿಕ ಬಯಲು ರಂಗಮಂದಿರ  ವೇದಿಕೆ ಉದ್ಘಾಟನೆ 

ಕುಂದಾಪುರ: ಕುಂಭಾಶಿಯ ಮಕ್ಕಳ ಮನೆಗೆ ಪ್ರಾಕೃತಿಕ ಬಯಲು ರಂಗಮಂದಿರದಂತಹ ಅತ್ಯಮೂಲ್ಯ ಆಸ್ತಿ ಮಾಡಿಕೊಟ್ಟಿದ್ದಕ್ಕೆ ಚಾಲೆಂಜರ್ಸ್ ಫೌಂಡೇಶನ್ ಸಂಸ್ಥೆಗೆ ಜಿಲ್ಲಾಡಳಿತವು ಅಭಿನಂದನೆ ಸಲ್ಲಿಸುತ್ತದೆ. ಇದೊಂದು ಅದ್ಭುತ ಪರಿಕಲ್ಪನೆಯಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಮಕ್ಕಳ ಪಾಠ ಹಾಗೂ ಇತರ ಉತ್ತಮ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಗುರುವಾರ ಸಂಜೆ ಕುಂಭಾಶಿಯ ಕೊರಗ ಕಾಲನಿ ಸಮೀಪದ ಮಕ್ಕಳ ಮನೆ ಬಳಿ ಚಾಲೆಂಜರ್ಸ್ ಫೌಂಡೇಶನ್ (ರಿ) ಕೊಡುಗೆಯಾಗಿ ನೀಡಿದ ಪ್ರಾಕೃತಿಕ ಬಯಲು ರಂಗಮಂದಿರ  ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಮನೆ ಕಾರ್ಯಕ್ರಮ ನಮ್ಮ ಮನೆಯ ಕಾರ್ಯಕ್ರಮದಂತೆ. ಹಾಗಾಗಿ ಈ ಕಾರ್ಯಕ್ರಮವನ್ನು ಸರಕಾರಿ ಕಾರ್ಯಕ್ರಮ ಎನ್ನುವ ರೀತಿ ಭಾವಿಸಿ ಬಂದಿದ್ದೇನೆ. ಕೊರಗ ಸಮುದಾಯದ ಯಾವುದೇ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಕಾರ್ಯಪೃವೃತ್ತವಾಗಿದೆ ಎಂದು ಡಿಸಿ ಹೇಳಿದರು.

ಚಾಲೆಂಜರ್ಸ್ ಫೌಂಡೇಶನ್ ಧ್ಯೇಯೋದ್ದೇಶ ಮತ್ತು ಸಾಗಿಬಂದ ಹಾದಿಯ ಬಗ್ಗೆ ಚಾಲೆಂಜರ್ಸ್ ಫೌಂಡೇಶನ್  ಸಿಇಒ ರಾಜೇಂದ್ರ ಶೆಟ್ಟಿ ಹಾಲಾಡಿ ಮಾತನಾಡಿ, ಚಾಲೆಂಜರ್ಸ್ ಫೌಂಡೇಶನ್ ಒಂದು ರಿಜಿಸ್ಟರ್ಡ್ ಆರ್ಗನೈಜೇಶನ್ ಆಗಿದ್ದು ಸಾಕಷ್ಟು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದೆ. ಯಾರಿಂದಲೂ ದೇಣಿಗೆ, ನಿಧಿ ಸಂಗ್ರಹ, ಮಾಡದೇ ಸಂಸ್ಥೆ ಸದಸ್ಯರ ಆದಾಯದ ಒಂದಷ್ಟು ಭಾಗವನ್ನು ಸಮಾಜಕ್ಕೆ ನೀಡಲಾಗುತ್ತಿದೆ.ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ಕೊಡಬೇಕು ಎನ್ನುವುದು ಚಾಲೆಂಜರ್ಸ್ ಫೌಂಡೇಶನ್ ಮೂಲ ಮಂತ್ರವಾಗಿದ್ದು ಸ್ವಾರ್ಥ ರಹಿತವಾಗಿ ಸಾಧನೆಯ ಜೊತೆಗೆ ನಾನು ಬೆಳೆಯುತ್ತಾ ಸಮಾಜವನ್ನು ಬೆಳೆಸಬೇಕು ಎಂದುಕೊಳ್ಳುವುದು ನಿಜವಾದ ಸಾರ್ಥಕತೆ ಮತ್ತು ಸಾಕ್ಷಾತ್ಕಾರ ಎಂಬುದು ಸಂಸ್ಥೆ ಉದ್ದೇಶ ಎಂದರು.

ಮಂಗಳೂರು  ಡೆಪ್ಯೂಟಿ ಪೊಲೀಸ್ ಕಮೀಷನರ್ ಹರಿರಾಂ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಮಕ್ಕಳ ಮನೆಯ ವಿದ್ಯಾರ್ಥಿಗಳಿಗೆ ಎಜುಕೇಶನ್ ಕೀಟ್ ವಿತರಿಸಲಾಯಿತು. ಮಕ್ಕಳ ಮನೆ ಶಿಕ್ಷಕಿ ವಿನಿತಾ ಸೇರಿದಂತೆ ಮಕ್ಕಳ ಮನೆಯ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು, ಶೇಖರ ಮರವಂತೆ, ಲಕ್ಷ್ಮಣ  ಬೈಂದೂರು, ಸುದರ್ಶನ ಕೋಟ, ಶರತ್ ಅವರನ್ನು ಕುಂಭಾಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಮಕ್ಕಳ ಮನೆಯಿಂದ ಡಿಸಿ, ಡಿಸಿಪಿ ಹಾಗೂ ಅತಿಥಿಗಳನ್ನು ಕೊರಗ ಸಮುದಾಯದ ಸಾಂಪ್ರದಾಯಿಕ ವಾದನಗಳಾದ ಡೋಲು, ಚಂಡೆ, ಕೊಳಲು ವಾದನದ ಮೂಲಕ ವೇದಿಕೆಗೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಚಾಲೆಂಜರ್ಸ್ ಫೌಂಡೇಶನ್  ಅಧ್ಯಕ್ಷ ರಕ್ಷಿತ್ ಸಿರಿಯಾನ್ ಬಾರ್ಕೂರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಅನಿತಾ ವಿ. ಮಡ್ಲೂರು, ಕುಂಭಾಸಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಕೊರಗ ಮುಖಂಡ ಲಕ್ಷ್ಮಣ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply