ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ

ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ ( ರಿ) ಬ್ರಹ್ಮಾವರ ತಾಲೂಕು ಇದರ ವತಿಯಿಂದ ಒಂದನೇ ತರಗತಿಯಿಂದ ಪಿಯೂಸಿವರೆಗಿನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸುವ ಕಾರ್ಯಕ್ರಮ ಬಾರ್ಕೂರಿನ ಚೌಳಿಕೆರೆಯ ಕುಮಾರಸ್ವಾಮಿ ಬಿ. ಆರ್. ಇವರ ಮನೆಯಲ್ಲಿ ನೆರವೇರಿತು.

ಜಗದ್ಗುರು ಶಂಕರಾಚಾರ್ಯರಿಗೆ ಜ್ಯೋತಿ ಬೆಳಗಿ ಪುಷ್ಪಾರ್ಚನೆಗೈದು ಕಾರ್ಯಕ್ರಮ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಂಘವು ಆರಂಭಿಸಿರುವ ” ವಿದ್ಯಾರ್ಥಿ ಮಿತ್ರ” ಎಂಬ ಕಾರ್ಯಕ್ರಮದ ಮಾಹಿತಿಯನ್ನು ನೀಡುತ್ತಾ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಸವಿತಾ ಎರ್ಮಾಳ್ ಮಾತನಾಡಿ ,” ವಿದ್ಯಾರ್ಥಿಗಳು ಇಂದು ತಾಂತ್ರಿಕಯುಗದಲ್ಲಿದ್ದು, ಯುವಜನಾಂಗ ಆ ಜ್ಞಾನವನ್ನು ತಮ್ಮ ವ್ಯಕ್ತಿತ್ವದ ವಿಕಸನಕ್ಕೆ, ಸಮಾಜದ ಒಳಿತಿಗಾಗಿ ಬಳಸಬೇಕು. ಕಾಲಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸಿಕೊಂಡು, ಸಮಾಜದ ಋಣ ತೀರಿಸುವ ಮಹತ್ತರ ಜವಾಬ್ದಾರಿಯನ್ನು ಅರಿತು ಮುಂದಡಿಯಿಡಬೇಕು. ಸಹಬಾಳ್ವೆ, ಒಗ್ಗಟ್ಟು, ದೀನರಿಗೆ ಸಹಾಯ ಹಸ್ತ ಚಾಚುವ ಮನೋಬಲ ಬೆಳೆಸಿಕೊಂಡು ಸಮಾಜದ ಆಸ್ತಿಯೆನಿಸಬೇಕು. ಸಂಸ್ಕಾರವಂತರಾಗಿ ತಮ್ಮ ಕುಟುಂಬದ ಮತ್ತು ಸಮಾಜದ ಘನತೆಯನ್ನು ಕಾಪಾಡಬೇಕು. ಶೃದ್ಧೆಯಿಂದ , ನಿಷ್ಠೆಯಿಂದ ಮಾಡುವ ಕಾರ್ಯ ಸಂಪೂರ್ಣ ಫಲಪ್ರದವಾಗುವುದರಲ್ಲಿ ಸಂಶಯಬೇಡ. ಪರಮಾತ್ಮನಲ್ಲಿ ನಂಬಿಕೆಯಿಟ್ಟು ಗುರುಹಿರಿಯರನ್ನು ಗೌರವಿಸುತ್ತಾ ಪ್ರಜ್ಞಾವಂತರಾಗಿ ಬಾಳಿ” ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಶ್ರೀಯುತ ಶಂಭುಶಂಕರರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಮಂಡಲದ ಉಪಾಧ್ಯಕ್ಷರಾದ ಶ್ರೀಯುತ ಉದಯ ಬಾರ್ಕೂರು ಇವರು ಶುಭಹಾರೈಸಿದರು. ಶ್ರೀಯುತ ರಾಮಚಂದ್ರ ರಾವ್ ಹೆರಂಜೆ ಇವರು ‘ವಿಳಾಸಾ ಮಾಹಿತಿ ಪುಸ್ತಕ’ ರಚನೆ ಬಗ್ಗೆ ಮಾಹಿತಿ ನೀಡಿದರು. ಶ್ರೀಯುತ ಪಟ್ಟಾಭಿರಾಮಚಂದ್ರ ರಾವ್ ಇವರು ಶಾರದಾ ಕೋ ಆಪರೇಟಿವ್ ಸೊಸೈಟಿಯ ವಿದ್ಯಾರ್ಥಿ ಸ್ನೇಹಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಾನಿಗಳನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ದೇಶಭಕ್ತಿಗೀತೆ, ಭಕ್ತಿಗೀತೆಗಳನ್ನು ಹಾಡಿದರು. ಅಧ್ಯಕ್ಷತೆ ವಹಿಸಿಕೊಂಡ ಶ್ರೀಯುತ ಮಂಜುನಾಥ ರಾವ್ ಇವರು ಕಲಿಕಾ ಸಾಮಾಗ್ರಿ ವಿತರಿಸಿ ಶುಭಹಾರೈಸಿದರು. ಶ್ರೀಯುತ ಉಮೇಶ ರಾವ್ ಸ್ವಾಗತಿಸಿದರು. ಶ್ರೀಯುತ ರವೀಂದ್ರ ರಾವ್ ವಂದಿಸಿದರು. ಶ್ರೀಮತಿ ಗೌರಿ ಎಸ್ ರಾವ್ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್ ಪ್ರಾರ್ಥಿಸಿದರು. ಶ್ರೀಮತಿ ಗೌರಿ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 
 
 
 
 
 
 
 
 
 
 

Leave a Reply