ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ದೇವಿನಗರ ಪ್ರದೇಶದ ‌ಹೊರವಲಯದಲ್ಲಿನ ಶಾಸನ

ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ದೇವಿನಗರ ಪ್ರದೇಶದ ‌ಹೊರವಲಯದಲ್ಲಿನ ಶಾಸನವನ್ನು ಶ್ರೀಮತಿ ಹನುಮಂತಮ್ಮ ದಿ. ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಯಾದ ಹೆಚ್. ಕಾಡಸಿದ್ದ ಮತ್ತು ಗುರುಮಹರ್ಷಿ ಕಾಲೇಜು ಸಿರಗುಪ್ಪ ಇಲ್ಲಿನ ಅಂತಿಮ ಬಿ.ಎ ವಿದ್ಯಾರ್ಥಿಯಾದ ಎಂ. ಹೊನ್ನುರವಲ್ಲಿ ಪತ್ತೆಮಾಡಿರುತ್ತಾರೆ. ಈ ಶಾಸನವನ್ನು ಓದಲು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಅಂತಿಮ ಬಿ.ಎ ವಿದ್ಯಾರ್ಥಿಗಳಾದ ದಿಶಾಂತ್ ದೇವಾಡಿಗ ಮತ್ತು ವಿಶಾಲ್ ರೈ. ಕೆ ಅವರು ಸಹಕಾರ ನೀಡಿರುತ್ತಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನದ ಲಿಪಿಯು ಸುಮಾರು 17-18 ನೇ ಶತಮಾನಕ್ಕೆ ಸೇರಿದ್ದು, ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ‌ ಹಾಗೂ ಇದರ‌ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ರೇಖಾ‌ಚಿತ್ರವನ್ನು ಕಾಣಬಹುದು.

5 ಸಾಲುಗಳನ್ನು‌ ಹೊಂದಿರುವ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು, ಟೆಂಕಲಕೋಟೆಯ ವಿರಕ್ತ ಹೊಸ ಮಟಕೆ ಮರಿಯ ಮಾಂತ್ತ (ತೂಂತ್ತ) ಸ್ವಾಮಿಗಳು ಮೋಕ್ಷದ ಸ್ವಸ್ತಿ ಎಂಬ ಉಲ್ಲೇಖವನ್ನು ‌ನೀಡುತ್ತದೆ.

ಈ ಶಾಸನದ ಕುರಿತು ತೆಕ್ಕಲಕೋಟೆಯ ಕಂಬಳಿ‌ ಮಠದ ಸ್ವಾಮಿಗಳಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳಲ್ಲಿ ಕೇಳಿಕೊಂಡಾಗ, ಹಿಂದೊಮ್ಮೆ ಒಬ್ಬ ಸ್ವಾಮಿಗಳು ಜನನ-ಮರಣದ ಚಕ್ರಗಳಿಂದ ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಬೇಕೆಂದು, ತಪಸ್ಸಿಗೆ ‌ಕುಳಿತು ಮೋಕ್ಷವನ್ನು ಪಡೆದಿದ್ದರು ಎಂದು ಹೇಳುತ್ತಾರೆ‌.

ಅಧ್ಯಯನ‌ ದೃಷ್ಟಿಯಿಂದ ಗಮನಿಸುವುದಾದರೆ, ಶಾಸನ ಉಲ್ಲೇಖಿತ ಟೆಂಕಲಕೋಟೆಯು ಪ್ರಸ್ತುತ ತೆಕ್ಕಲಕೋಟೆ ಎಂದು ಕರೆಯಲ್ಪಡುವ ಸ್ಥಳವಾಗಿರಬಹುದು ಹಾಗೆಯೇ ವಿರಕ್ತ‌ ಹೊಸ ಮಠದ ತೂಂತ್ತ (ಮಾಂತ್ತ) ಸ್ವಾಮಿಗಳ ಮೋಕ್ಷದ ವಿಷಯವನ್ನು ಈ ಶಾಸನವು ತಿಳಿಸುತ್ತದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply