ಪಿಲಾರ್ಕಾನ ಶ್ರೀ ಮಹಾಲಿಂಗೇಶ್ವರ ದೇವಾಲಯ~ ದಿವ್ಯ

ಶಿರ್ವ-ಬೆಳ್ಮಣುಗಳ‌ ನಡುವೆ ಇರುವ ಗ್ರಾಮವೇ ಪಿಲಾರ್/ಪಿಲಾರ್ಕಾನ. ಪಿಲಾರ್ಕಾನ‌ ಎಂದರೆ ಸಮೃದ್ಧವಾದ ಕಾಡಿನ‌ ಪ್ರದೇಶವೆಂದು ಹೇಳಬಹುದು.

ಶ್ರೀ‌ ಮಹಾಲಿಂಗೇಶ್ವರ ದೇವಾಲಯ: ಮುಖ್ಯ ಮಾರ್ಗದಿಂದ ಸುಮಾರು 200 ಮೀ. ಕಾಡಿನ ಒಳಗೆ ಈ ದೇವಾಲಯವಿದೆ. ಇಲ್ಲಿಗೆ ಬರುವಂತಹ ಭಕ್ತರುಗಳು ದೇವಾಲಯಕ್ಕೆ 11 ಬಾರಿ ಪ್ರದಕ್ಷಿಣೆ ಮಾಡಿದರೆ ಅಥವಾ 48 ಬಾರಿ ಪ್ರದಕ್ಷಿಣೆ ಮಾಡಿದರೆ ಅವರಂದುಕೊಂಡ ಕಾರ್ಯಗಳು ಈಡೇರುತ್ತವೆ ಎಂಬ ನಂಬಿಕೆ‌ ಈಗಲೂ ಇದೆ‌.

ದಂತಕಥೆಯ ಪ್ರಕಾರ ಈ‌ ದೇವಾಲಯವನ್ನು ಭಾರ್ಗವ ಮುನಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗುತ್ತದೆ. ಈ ದೇವಾಲಯಕ್ಕೆ ಆರು ಕ್ಷೇತ್ರಗಳಾದ ಸುಬ್ರಹ್ಮಣ್ಯ, ಸಾಂತೂರು, ಸೂಡ, ಶಾಸ್ತಾವೂ, ಕಳತ್ತೂರು ಮತ್ತು ಪಾದೂರು ಸೇರುತ್ತದೆ. ಶಿಲಾಮಯವಾಗಿರುವ ಈ ದೇವಾಲಯವು ಗರ್ಭಗೃಹ, ತೀರ್ಥ ಮಂಟಪ, ಪ್ರಾಕಾರ ಮಂಟಪ, ಮತ್ತು‌ ಮಹಾದ್ವಾರವನ್ನೊಳಗೊಂಡಿದೆ.

ಗರ್ಭಗುಡಿಯ ಪಾಣಿಪೀಠದಲ್ಲಿ ಶಿವಲಿಂಗದ ಬದಲು ಚತುರ್ಮುಖವುಳ್ಳ ಶಿವನ‌ ವಿಗ್ರಹವಿದ್ದು, ಏಕಕಾಲದಲ್ಲಿ ನಾಲ್ಕು ದಿಕ್ಕುಗಳಿಗೂ ಮುಖಮಾಡಿ ಧ್ಯಾನರೂಢನಾಗಿ ಕುಳಿತಿರುವಂತೆ ಭಾಸವಾಗುತ್ತದೆ.

ಗರ್ಭಗುಡಿಗೆ ಅಭಿಮುಖವಾಗಿ ನಂದಿ ವಿಗ್ರಹವಿದ್ದು, ಇದಕ್ಕೆ ಒಂದು ಐತಿಹ್ಯವಿದೆ ಏನೆಂದರೆ ಎಲ್ಲೂರು ದೇವಾಲ ಯದ ಅರ್ಚಕರು ಈ ನಂದಿಗೆ ಬೈದಿರುವುದಕ್ಕೆ ನಂದಿಯು ಈ ದೇವಾಲಯಕ್ಕೆ ಬಂದಿತ್ತು ಎಂಬ ಪ್ರತೀತಿ‌ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಕೂಡ ನಂದಿಯ ಕಾಲಿನ ಹೆಜ್ಜೆಯ ಗುರುತನ್ನು ಈ ದೇವಾಲಯದಲ್ಲಿ ಕಾಣಬಹುದು.

ಧ್ಯಾನರೂಢ ಚತುರ್ಮುಖ ಶಿವನ ಕಲ್ಪನೆ‌ ರಾಷ್ಟ್ರಕೂಟ ಕಾಲದಲ್ಲಿ ಕಾಣುತ್ತೇವೆ. ಹಾಗೆಯೇ ಎಲಿಫೆಂಟಾದ ಗುಹಾಲಯದಲ್ಲಿ ಬ್ರಹತ್ ಚತುರ್ಮುಖ ಶಿವನ ಶಿಲಾವಿಗ್ರಹವನ್ನು ನೋಡಬಹುದು. ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಕಲ್ಪನೆಯನ್ನು ಪಿಲಾರ್ಕಾನದ ಶ್ರೀ‌ ಮಹಾಲಿಂಗೇಶ್ವರ ದೇವಾಲಯವು ಪುಷ್ಟೀಕರಿಸುವಂತಿದೆ.

ದೇವಾಲಯದ ವಾಸ್ತುಶೈಲಿಯನ್ನು ಆಧಾರವಾಗಿರಿಸಿಕೊಂಡು ಈ ದೇವಾಲಯವು ಸುಮಾರು 9-10ನೇಯ ಶತಮಾನಕ್ಕೆ ಸೇರಿದೆ ಎಂದು ಹೇಳಬಹುದು. ಶ್ರೀ‌ ಮಹಾಲಿಂಗೇಶ್ವರ ದೇವಾಲಯವು ಚತುರ್ಮುಖ ಶಿವನ ಆರಾಧನೆ ‌ಇರುವ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದ್ದು, ಹಚ್ಚ ಹಸುರಿನ ಕಾಡಿನ ನಡುವೆ ಕಂಗೊಳಿಸುವುದರ ಜೊತೆಗೆ ಭಕ್ತರ ನೆಚ್ಚಿನ‌ ತಾಣವಾಗಿದೆ.

ಸಂಗ್ರಹ: ದಿವ್ಯ, ಅಂತಿಮ ಬಿ.ಎ.ವಿದ್ಯಾರ್ಥಿನಿ, ಎಂ.ಎಸ್.ಆರ್.ಎಸ್. ಕಾಲೇಜು-ಶಿರ್ವ

 
 
 
 
 
 
 
 
 
 
 

Leave a Reply